janadhvani

Kannada Online News Paper

ಸಂಚಾರ ದಂಡ: ವಾಟ್ಸ್ಆ್ಯಪ್‌ನಲ್ಲಿ ಸುಳ್ಳು ಪ್ರಚಾರ- ಖತರ್ ಸಂಚಾರ ಇಲಾಖೆ

ದೋಹಾ: ಸಂಚಾರಿ ಕಾನೂನು ಉಲ್ಲಂಘನೆಗೆ ಹೊಸ ದಂಡ ಏರ್ಪಡಿಸಲಾದ ಬಗ್ಗೆ ವಾಟ್ಸ್ ಆ್ಯಪ್‌ನಲ್ಕಿ ಸುಳ್ಳು ಸುದ್ದಿ ಹರಡಲಾಗಿದೆ ಎಂದು ಖತರ್ ಸಂಚಾರ ಇಲಾಖೆ ಹೇಳಿದೆ. ಅಸ್ತಿತ್ವದಲ್ಲಿರುವ ದಂಡಗಳನ್ನು ಇನ್ನೂ ಹೆಚ್ಚಿಸಲಾಗಿದೆ ಮತ್ತು ಕೆಲವು ಹೊಸ ದಂಡಗಳನ್ನು ಹೇರಲಾಗಿದೆ ಎಂದು ವಾಟ್ಸ್ಆ್ಯಪ್‌ನಲ್ಲಿ ಪ್ರಸಾರ ಮಾಡಲಾಗುತ್ತಿದೆ. ಪ್ರಸಾರವಾಗುತ್ತಿರುವ ಚಿತ್ರ ನಕಲಿ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಸಂಚಾರ ಇಲಾಖೆ ಇದನ್ನು ಅಧಿಕೃತ ಟ್ವಿಟರ್ ಖಾತೆಯ ಮೂಲಕ ಪ್ರಕಟಿಸಿದೆ. ಅಧಿಕೃತವಲ್ಲದ ಮಾಧ್ಯಮಗಳ ಮೂಲಕ ಪಡೆದ ಮಾಹಿತಿಯನ್ನು ನಂಬಬಾರದು ಎಂದು ಅಧಿಕಾರಿಗಳು ಹೇಳಿದರು.
ಸಂಚಾರ ಇಲಾಖೆಯ ಹೆಸರಿನಲ್ಲಿ ದೇಶದ ಲೋಗೋ ವನ್ನು ಬಳಸಿಕೊಂಡು ವಾಟ್ಸ್ಆ್ಯಪ್ ಮೂಲಕ ಸುಳ್ಳು ಮಾಹಿತಿ ಹರಡಲಾಗಿದೆ. ಕಾರಿನಲ್ಲಿ ಜೋರಾಗಿ ಸಂಗೀತ ನುಡಿಸಿದರೆ 5,000 ರಿಯಾಲ್ ಮತ್ತು ಕಾರಿನಲ್ಲಿ ಧೂಮಪಾನ ಮಾಡಿದರೆ 2,000 ರಿಯಾಲ್ ದಂಡ ವಿಧಿಸಲಾಗುವುದು ಎನ್ನುವ ರೀತಿಯಲ್ಲಿ ಸುದ್ದಿ ಹರಡಲಾಗಿದ್ದು, ಇದನ್ನು ಅಧಿಕೃತಗೊಳಿಸಲು, ಖತರ್ ಆಂತರಿಕ ಸಚಿವಾಲಯ ಮತ್ತು ಸಂಚಾರ ಇಲಾಖೆಯ ಲೋಗೋವನ್ನು ಬಳಸಲಾಗಿದೆ.

ಸುದ್ದಿ ಖಾತರಿಪಡಿಸದೆ ವದಂತಿಗಳನ್ನು ಹರಡುವ ಬಗ್ಗೆ ಖತರ್ ಅಧಿಕಾರಿಗಳು ಹಲವಾರು ಬಾರಿ ಎಚ್ಚರಿಕೆ ನೀಡಿದ್ದಾರೆ. ನೀವು ಈ ರೀತಿಯ ಸುದ್ದಿಗಳನ್ನು ಸ್ವೀಕರಿಸಿದರೆ, ಅಧಿಕಾರಿಗಳನ್ನು ಸಂಪರ್ಕಿಸಬೇಕು ಅಥವಾ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಬೇಕು ಎಂದು ತಿಳಿಸಲಾಗಿದೆ.