ಬೆಂಗಳೂರು: ಪವಿತ್ರ ಬಕ್ರೀದ್ ಹಬ್ಬವನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದ್ದು, ಈ ಸಂಬಂಧ ರಕ್ಷಣೆ ನೀಡುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಮುಸ್ಲಿಂ ಶಾಸಕರು ಮನವಿ ಮಾಡಿದ್ದಾರೆ.
ಆಗಸ್ಟ್ 12ರಂದು ರಾಜ್ಯಾದ್ಯಂತ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ. ಸಾಮರ್ಥ್ಯಕ್ಕನುಗುಣವಾಗಿ ಪ್ರಾಣಿ ಬಲಿ ಕೊಡುವ ಪದ್ಧತಿ ಜಾರಿಯಲ್ಲಿದೆ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ವಾಹನಗಳಲ್ಲಿ ಪ್ರಾಣಿ ಸಾಗಣೆಗೆ ಅಡಚಣೆಯಾಗದಂತೆ ರಕ್ಷಣೆ ನೀಡಲು ಪೊಲೀಸ್ ಮತ್ತು ಜಿಲ್ಲಾಡಳಿತಕ್ಕೆ ಸೂಚಿಸಬೇಕೆಂದು ಶಾಸಕರು ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಈ ಮನವಿ ಪತ್ರ ಬರೆದಿದ್ದಾರೆ.ಶಾಸಕರಾದ ಸಿಎಂ ಇಬ್ರಾಹಿಂ, ರಹೀಂ ಖಾನ್, ಎನ್‌ಎ ಹ್ಯಾರಿಸ್, ನಜೀರ್ ಅಹಮದ್, ಅಬ್ದುಲ್ ಜಬ್ಬಾರ್ ಸೇರಿದಂತೆ ಹಲವು ಶಾಸಕರು ಸಹಿ ಹಾಕಿದ್ದಾರೆ.
ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸೂಕ್ತ ರಕ್ಷಣೆ, ಭದ್ರತೆ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಕೂಡಲೇ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.