ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆಯಾದ ತ್ರಿವಳಿ ತಲಾಖ್ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.ಸದ್ಯದಲ್ಲಿಯೇ ಅದು ಕಾನೂನು ಆಗಿ ಜಾರಿಗೆ ಬರಲಿದೆ ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ.
ಮುಸ್ಲಿಂ ಧರ್ಮದ ವೈಯಕ್ತಿಕ ಕಾನೂನಿನಲ್ಲಿ ತ್ರಿವಳಿ ತಲಾಖ್ ಪದ್ಧತಿಗೆ ಸಮ್ಮತಿ ಇತ್ತು. ಮೂರು ಬಾರಿ ತಲಾಖ್ ಹೇಳುವ ಮೂಲಕ ಪತ್ನಿಗೆ ವಿಚ್ಛೇದನ ಕೊಡಬಹುದಾಗಿತ್ತು. ಇಸ್ಲಾಮ್ ನ ಮೂಲ ಕಾನೂನಿನಲ್ಲಿ ತ್ರಿವಳಿ ತಲಾಖ್ ಗೆ ಬೇರೆಯೇ ವಿಧಿವಿಧಾನಗಳೂ ಇವೆ. ಆದರೂ ಮುಸ್ಲಿಂ ಪುರುಷರು ಇದನ್ನು ದುರ್ಬಳಕೆ ಮಾಡುವುದರಿಂದ ಮದುವೆಯಾದ ಮುಸ್ಲಿಂ ಮಹಿಳೆಯರಿಗೆ ತೀವ್ರ ತೊಂದರೆಯಾಗುತ್ತಿದೆ ಎಂಬ ನೆಪದಲ್ಲಿ ಮುಸ್ಲಿಮ್ ಪುರಷರು ತಮ್ಮ ಪತ್ನಿಯೊಂದಿಗೆ ದಾಂಪತ್ಯ ಜೀವನ ನಡೆಸಲು ಸಾಧ್ಯವಿಲ್ಲದಿದ್ರೂ ತಕ್ಷಣ ವಿಚ್ಛೇದನ ನೀಡಬಾರದು ಎಂಬ ನೆಲೆಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರವು ತ್ರಿವಳಿ ತಲಾಖ್ ಮಸೂದೆಯನ್ನು ಸದನದಲ್ಲಿ ಮಂಡಿಸಿ ಅನುಮೋದನೆ ಪಡೆಯಿತು.
ಇದಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಕೂಡ ಸಿಕ್ಕಿದ್ದು ಇನ್ನು ಮುಂದೆ ತ್ರಿವಳಿ ತಲಾಖ್ ಹೇಳಿದರೆ ಕ್ರಿಮಿನಲ್ ಅಪರಾಧವಾಗಲಿದೆ. ಲೋಕಸಭೆಯಲ್ಲಿ ಮುಸ್ಲಿಂ ಮಹಿಳೆಯರ (ಮದುವೆಯ ಹಕ್ಕುಗಳ ರಕ್ಷಣೆ) ಮಸೂದೆ ಕಳೆದ ವಾರ ಅನುಮೋದನೆಗೊಂಡಿತ್ತು.
ಇನ್ನು ಮುಂದೆ ಮುಸ್ಲಿಮ್ ಪತ್ನಿಗೆ ತ್ರಿವಳಿ ತಲಾಖ್ ಹೇಳಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ದೊರೆಯಲಿದೆ.
ಇಸ್ಲಾಮಿನಲ್ಲಿ ಮದುವೆ ಎಂಬುವುದು ಒಂದು ಒಡಂಬಡಿಕೆಯಾಗಿದೆ. ತಲಾಖ್ ನೀಡುವ ಮೂಲಕ ಆ ಒಡಂಬಡಿಕೆ ಮುರಿದು ಹೋಗುತ್ತದೆ. ಇಸ್ಲಾಮ್ ಧರ್ಮ ವಿಶ್ವಾಸಿಯೊಬ್ಬ ತಲಾಖ್ ಹೇಳಲ್ಪಟ್ಟ ತನ್ನ ಪತ್ನಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸುವುದು ನಿಷಿದ್ಧವೂ ಆಗಿರುತ್ತದೆ.
ಪತಿಗೆ ಪತ್ನಿಯೊಂದಿಗೆ ದಾಂಪತ್ಯ ಜೀವನ ನಡೆಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲವೆಂಬ ಘಟ್ಟದಲ್ಲಿ, ಅದೇ ರೀತಿ ಪತ್ನಿಗೆ ತನ್ನ ಪತಿಯೊಂದಿಗೆ ಜೀವನ ನಡೆಸಲು ಸಾಧ್ಯವೇ ಇಲ್ಲ ಎಂಬ ಸಂದರ್ಭದಲ್ಲಿ ತನ್ನ ಬೇಡಿಕೆಯಂತೆ ತನ್ನ ಪತಿ ಅವಳನ್ನು ಶೀಘ್ರ ವಿವಾಹ ಮೋಚನೆಗೊಳಿಸುವ ಪದ್ಧತಿಯಾಗಿದೆ ತ್ರಿವಳಿ ತಲಾಖ್(ಎಮರ್ಜೆನ್ಸಿ ಎಕ್ಸಿಟ್). ಈ ಪದ್ಧತಿಯಿಂದ ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚಿನ ಅನುಕೂಲವೂ ಆಗಿದೆ. ತನಗೆ ಇಷ್ಟವಿರುವ ವರನನ್ನು ಮದುವೆ ಮಾಡಿ ಜೀವನ ನಡೆಸಬಹುದು.
ಆದ್ರೆ ಈಗ ಕೇಂದ್ರ ಸರಕಾರವು ಮುಸ್ಲಿಮ್ ಮಹಿಳೆಯರ ಸಂರಕ್ಷಣೆ ಎಂಬ ಲೇಬಲಿನಲ್ಲಿ ತಂದ ಧರ್ಮವಿರೋಧಿ ಕಾನೂನು ಪ್ರಕಾರ ಪತಿ ತನ್ನ ಪತ್ನಿಯನ್ನು ತ್ರಿವಳಿ ತಲಾಖ್ ನೀಡಿ ಶೀಘ್ರ ತೊರೆಯುವಂತಿಲ್ಲ, ಪರಸ್ಪರ ತೃಪ್ತಿಯಿಲ್ಲದೇ ನರಕಯಾತನೆ ಅನುಭವಿಸಬೇಕು, ತಲಾಖ್ ನೀಡಿದರೆ ಪತಿ ಜೈಲಿನಲ್ಲೂ, ಪತ್ನಿ ಮನೆಯಲ್ಲೂ ಕಷ್ಟಕರ ಜೀವನ ನಡೆಸಬೇಕು. ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಿ ಮತ್ತೆ ತಲಾಖ್ ನೀಡಲ್ಪಟ್ಟ ಅದೇ ಪತ್ನಿಯೊಂದಿಗೆ ಧರ್ಮನಿಷಿದ್ಧ ದಾಂಪತ್ಯ ಜೀವನ ನಡೆಸಬೇಕು, ಕಾರಣ ತ್ರಿವಳಿ ತಲಾಖ್ ನೊಂದಿಗೆ ದಂಪತಿಗಳು ಪರಸ್ಪರ ಬೇರ್ಪಟ್ಟಿರುತ್ತಾರೆ. ಇಸ್ಲಾಮ್ ಪ್ರಕಾರ ಅವರು ಪತಿ,ಪತ್ನಿಯರಾಗಿರುವುದಿಲ್ಲ.