ನವದೆಹಲಿ: ಸಾಕಷ್ಟು ಪರ-ವಿರೋಧ ವಾದಗಳಿಗೆ ಗುರಿಯಾಗಿದ್ದ ತ್ರಿವಳಿ ತಲಾಖ್ ಕುರಿತ ಮಸೂದೆಯು (2019ರ ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ) ಕೊನೆಗೂ ರಾಜ್ಯಸಭೆಯ ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ತ್ರಿವಳಿ ತಲಾಖ್ ರದ್ದುಗೊಳಿಸುವ ಕೇಂದ್ರದ ನಿರ್ಧಾರಕ್ಕೆ ಸಂಸತ್ತಿನ ಅಂಗೀಕಾರ ಸಿಕ್ಕಂತಾಗಿದೆ.
ಈ ಹಿಂದೆ ಮೂರು ಬಾರಿ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದರೂ ರಾಜ್ಯಸಭೆಗೆ ಬಂದಾಗಲೆಲ್ಲ ಅದು ಹಿನ್ನಡೆ ಅನುಭವಿಸುತ್ತಿತ್ತು. ಈ ಬಾರಿ ರಾಜ್ಯಸಭೆಯ ಅಗ್ನಿ ಪರೀಕ್ಷೆಯಲ್ಲಿ ಮಸೂದೆ ಗೆದ್ದು ಬಂದಿದೆ. ಮಸೂದೆ ಪರವಾಗಿ 99 ಮತಗಳು ಬಂದರೆ, ವಿರೋಧವಾಗಿ 84 ಮತಗಳು ಬಂದವು.ಮುಂದಿನ ಹಂತದಲ್ಲಿ ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಳುಹಿಸಲಾಗುತ್ತದೆ. ರಾಷ್ಟ್ರಪತಿಗಳ ಅಂಕಿತ ಬಿದ್ದ ಬಳಿಕ ಫೆ. 21ರಂದು ಇದೇ ವಿಚಾರವಾಗಿ ರಾಷ್ಟ್ರಪತಿ ಯವರು ನೀಡಿದ್ದ ಅಧ್ಯಾದೇಶಕ್ಕೆ ಬದಲು ಕಾನೂನಾಗಿ ಈ ಮಸೂದೆ ಜಾರಿಗೊಳ್ಳಲಿದೆ.
ವಿಪಕ್ಷ ಸದಸ್ಯರ ಗೈರು ಹಾಗೂ ಸಭಾತ್ಯಾಗಗಳು ವರವಾಯಿತು.
ಮತದಾನಕ್ಕೂ ಮೊದಲು ಅಂದಾಜಿಸಿದ್ದ ಪ್ರಕಾರ, 245 ಸದಸ್ಯ ಬಲವಿರುವ ರಾಜ್ಯಸಭೆಯಲ್ಲಿ 4 ಸ್ಥಾನಗಳು ಖಾಲಿ ಇರುವುದರಿಂದ ಸದನದ ಒಟ್ಟು ಬಲ 241 ಆಗಿದ್ದು ಮಸೂದೆಯ ಪರವಾಗಿ 121 ಮತಗಳು ಬೇಕೆಂದು ನಿರ್ಧರಿಸಲಾಗಿತ್ತು. ಆದರೆ ಮಂಗಳವಾರದ ಕಲಾಪಕ್ಕೆ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ತೆಲಂಗಾಣ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ವೈಎಸ್ಆರ್ ಕಾಂಗ್ರೆಸ್ನ ಕೆಲವು ಸಂಸದರು ಗೈರಾಗಿದ್ದರು. ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಮಸೂದೆಯನ್ನು ಮಂಡಿಸಿದ ಅನಂತರ, ಸುಮಾರು ನಾಲ್ಕೂವರೆ ಗಂಟೆಗಳ ಕಾಲ ನಡೆದ ಚರ್ಚೆಯ ವೇಳೆ ಜೆಡಿಯು ಹಾಗೂ ಎಐಎಡಿಎಂಕೆ ಸಭಾತ್ಯಾಗ ಮಾಡಿದವು. ಹೀಗೆ ವಿಪಕ್ಷ ಸದಸ್ಯರ ಗೈರು ಹಾಗೂ ಸಭಾತ್ಯಾಗಗಳು ರಾಜ್ಯಸಭೆಯಲ್ಲಿ ವಿಪಕ್ಷದವರ ಸಂಖ್ಯೆಯನ್ನು ಗಣನೀಯವಾಗಿ ಕುಗ್ಗಿಸಿತು. ಹಾಗಾಗಿ ಸದನದ ಸದಸ್ಯ ಬಲ 183ಕ್ಕೆ ಇಳಿಯಿತು ಹಾಗೂ ಮಸೂದೆಯ ಬಹುಮತಕ್ಕೆ 92 ಮತಗಳು ಬೇಕಾದವು. ಇದರ ನಡುವೆಯೇ ಎನ್ಡಿಎ ಹಾಗೂ ಯುಪಿಎನಲ್ಲಿ ಗುರುತಿಸಿಕೊಳ್ಳದ ಬಿಜೆಡಿ ಪಕ್ಷವು ಮತದಾನದಲ್ಲಿ ಮಸೂದೆಯನ್ನು ಬೆಂಬಲಿಸುವುದಾಗಿ ಘೋಷಿಸಿದ್ದು ಸರಕಾರಕ್ಕೆ ಅನುಕೂಲವಾಯಿತು.
ರಾಜ್ಯಸಭೆಯಲ್ಲಿ ಯಾರು ಏನೆಂದರು?
ಗುಲಾಂ ನಬಿ ಆಜಾದ್, ಕಾಂಗ್ರೆಸ್ ನಾಯಕ
– ಈ ಮಸೂದೆಯು ರಾಜಕೀಯ ಪ್ರೇರಿತವಾಗಿದ್ದು, ಮುಸ್ಲಿಂ ಕುಟುಂಬಗಳನ್ನು ನಾಶ ಮಾಡುವುದೇ ಇದರ ಪ್ರಮುಖ ಉದ್ದೇಶವಾಗಿದೆ. ಪತಿ-ಪತ್ನಿ ಪರಸ್ಪರರ ವಿರುದ್ಧ ವಾದಿಸಲು ವಕೀಲರನ್ನು ನೇಮಿಸಿಕೊಳ್ಳಬೇಕಾದ ಸ್ಥಿತಿ ಎದುರಾಗುತ್ತದೆ. ವಕೀಲರ ಶುಲ್ಕಕ್ಕಾಗಿ ತಮ್ಮಲ್ಲಿರುವ ಆಸ್ತಿಪಾಸ್ತಿ ಮಾರಾಟ ಮಾಡಬೇಕಾಗುತ್ತದೆ. ಜೈಲು ಅವಧಿ ಮುಗಿಯುವಾಗ ಇಬ್ಬರೂ ದಿವಾಳಿಯಾಗುತ್ತಾರೆ.
– ಈ ಮಸೂದೆಯಲ್ಲಿ ನಾವು ಯಾವ ಆಕ್ಷೇಪವನ್ನು ಎತ್ತಿದ್ದೆವೋ ಅದನ್ನು ಬಗೆಹರಿಸುವ ಬದಲಾಗಿ, ಸರಕಾರವು ಕೇವಲ ಕಾಸೆ¾ಟಿಕ್ ಸರ್ಜರಿ ಮಾಡಿದೆ. ಇಸ್ಲಾಂನಲ್ಲಿ ವಿವಾಹ ಎನ್ನುವುದು ಒಂದು ಸಿವಿಲ್ ಒಪ್ಪಂದ. ಆದರೆ, ಸರಕಾರವು ಈಗ ಈ ಕಾನೂನಿನ ಮೂಲಕ ಅದಕ್ಕೆ ಕ್ರಿಮಿನಲ್ ಲೇಪ ಹಚ್ಚುತ್ತಿದೆ.
– ತ್ರಿವಳಿ ತಲಾಖ್ ಕಾನೂನಿನಿಂದಾಗಿ ಜೈಲು ಸೇರಿದ ವ್ಯಕ್ತಿಯ ಪತ್ನಿಗೆ ಸರಕಾರವೇನಾದರೂ ಪೋಷಣೆ ಭತ್ತೆ ನೀಡುತ್ತದೆಯೇ ಎಂದು ನಾನು ಅರಿಯಲು ಬಯಸುತ್ತೇನೆ. ಜೈಲಲ್ಲಿ 3 ವರ್ಷಗಳನ್ನು ಕಳೆದ ವ್ಯಕ್ತಿಯು ಹೇಗೆ ತಾನೇ ವಾಪಸ್ ಹೋಗಿ ಪತ್ನಿಯೊಂದಿಗೆ ಶಾಂತಿಯುತವಾಗಿ ಜೀವಿಸಬಲ್ಲ?
– ಒಟ್ಟಿನಲ್ಲಿ ಈ ಕಾನೂನು ಮುಸ್ಲಿಂ ಕುಟುಂಬಗಳು ಮತ್ತು ಸಮಾಜವನ್ನು ನಾಶ ಮಾಡುವಂಥದ್ದು. ಸುಪ್ರೀಂ ಕೋರ್ಟ್ ಬಗ್ಗೆ ಅಷ್ಟೊಂದು ಗೌರವವಿರುವ ಕೇಂದ್ರ ಸರಕಾರವು, ಥಳಿಸಿ ಹತ್ಯೆಯಂಥ ಪ್ರಕರಣ ತಡೆಗೆ ಕಾನೂನು ಏಕೆ ತರುತ್ತಿಲ್ಲ?
– ಒಂದು ನಿರ್ದಿಷ್ಟ ಧರ್ಮವನ್ನು ನಾಶ ಮಾಡಲೆಂದು ಕಾನೂನು ಮಾಡಬಾರದು. ಅದಕ್ಕಾಗಿ ಈ ಮಸೂದೆಯನ್ನು ಸಂಸತ್ನ ಸ್ಥಾಯೀ ಸಮಿತಿಗೆ ಕಳುಹಿಸಿ. ಅಲ್ಲಿ ಯಾವುದನ್ನು ಉಳಿಸಿಕೊಳ್ಳಬೇಕು, ಯಾವುದನ್ನು ತೆಗೆಯಬೇಕು ಎಂಬ ನಿರ್ಧಾರವಾಗಲಿ.
– ಸರಕಾರವು ಅಸಾಂವಿಧಾನಿಕ ಕಾನೂನು ತರುವ ಬದಲು, ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಿ, ಅವರ ಸಬಲೀಕರಣಕ್ಕೆ ಯತ್ನಿಸಲಿ. ಸಬಲೀಕರಣವು ಕೇವಲ ಮುಸ್ಲಿಂ ಮಹಿಳೆಯರಿಗೆ ಆದರೆ ಸಾಲದು, ಹಿಂದೂ, ಕ್ರಿಶ್ಚಿಯನ್, ಜೈನ ಮಹಿಳೆಯರ ಸಬಲೀಕರಣವೂ ಸರಕಾರದ ಉದ್ದೇಶವಾಗಬೇಕು.
ದೋಲಾ ಸೇನ್, ಟಿಎಂಸಿ ಸಂಸದೆ
ತ್ರಿವಳಿ ತಲಾಖ್ಗೆ ಸಂಬಂಧಿಸಿ ಅಧ್ಯಾದೇಶಕ್ಕೆ ತರಲಾಗಿದೆ ಎಂದಾಕ್ಷಣ, ಅದರ ಪರಿಶೀಲನೆ ನಡೆದಿದೆ ಎಂದರ್ಥವಲ್ಲ. ನಮ್ಮದು ಇನ್ನೂ ಅಧ್ಯಕ್ಷೀಯ ಮಾದರಿ ಅಥವಾ ಸರ್ವಾಧಿಕಾರಿ ಸರಕಾರವಾಗಿಲ್ಲ. ಅದು ಆಗುವವರೆಗಾದರೂ ನಾವು ಸಂಸದೀಯ ಪ್ರಜಾಪ್ರಭುತ್ವದಂತೆ ಕಾರ್ಯನಿರ್ವಹಿಸೋಣ. ಮಸೂದೆಯಂತೆ, ಪತಿಗೆ 3 ವರ್ಷ ಜೈಲು ವಿಧಿಸಲಾಗುತ್ತದೆ. ಅಂದರೆ ಆ 3 ವರ್ಷದ ಅವಧಿಯಲ್ಲಿ ಪತ್ನಿಗೆ ಮರುಮದುವೆಯಾಗುವ ಅವಕಾಶವಿದೆಯೇ? ಆಕೆಗೆ ಜೀವನಾಂಶವನ್ನಾದರೂ ನೀಡುವುದು ಹೇಗೆ? ಸರಕಾರಕ್ಕೆ ಮಹಿಳೆಯರ ಬಗ್ಗೆ ಅಷ್ಟೊಂದು ಕಾಳಜಿಯಿದ್ದರೆ, ಸರಕಾರವು ಇನ್ನೂ ಒಂದು ದಿನ ಅಧಿವೇಶನ ವಿಸ್ತರಿಸಿ, ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರಲಿ. ಅದರಿಂದ 60 ಕೋಟಿ ಮಹಿಳೆಯರಿಗೆ ಅನುಕೂಲವಾಗುತ್ತದೆ.
ವಿಜಯ ಸಾಯಿ ರೆಡ್ಡಿ, ವೈಎಸ್ಸಾರ್ ಕಾಂಗ್ರೆಸ್
3 ವರ್ಷಗಳ ಕಾಲ ಪತಿಯನ್ನು ಜೈಲಿಗೆ ಅಟ್ಟುವುದೆಂದರೆ, ಅಲ್ಲಿಗೆ ಸಂಧಾನದ ಬಾಗಿಲು ಮುಚ್ಚಿದಂತೆ.
ಇದರಿಂದ ಆ ಮಹಿಳೆಗೆ ಆಗುವ ಅನುಕೂಲ ಯಾದರೂ ಏನು?
ಮಸೂದೆ ಏನು ಹೇಳುತ್ತದೆ?
1 ಎಲೆಕ್ಟ್ರಾನಿಕ್ ರೂಪದಲ್ಲಿ ಅಥವಾ ಬರವಣಿಗೆ ರೂಪದಲ್ಲಿ ಒಮ್ಮೆಲೇ ಮೂರು ಬಾರಿ ತ್ರಿವಳಿ ತಲಾಖ್ ಹೇಳುವುದನ್ನು ಅನೂರ್ಜಿತ ಎಂದು ಪರಿಗಣಿಸುತ್ತದೆ.
2 ಇದು ಶಿಕ್ಷಾರ್ಹ ಅಪರಾಧ. (ಪೊಲೀಸ್ ಅಧಿಕಾರಿ ವಾರಂಟ್ ಇಲ್ಲದೆ ತಲಾಖ್ ಕೊಟ್ಟವನನ್ನು ಬಂಧಿಸಬಹುದು. ಆದರೆ ಆತನ ಪತ್ನಿ, ಪತ್ನಿಯ ರಕ್ತ ಸಂಬಂಧಿಕರು ದೂರು ನೀಡಬೇಕು).
3 ಬಂಧಿತ ಪುರುಷನಿಗೆ ಜಾಮೀನು ಕೊಡುವ ಅಧಿಕಾರ ಮ್ಯಾಜಿಸ್ಟ್ರೇಟ್ಗೆ ಇರುತ್ತದೆ. ಆದರೆ ತಲಾಖ್ ಪಡೆದ ಮಹಿಳೆಯ ವಾದ ಆಲಿಸಬೇಕು.
4 ಪತಿ ಮತ್ತು ಪತ್ನಿಗೆ ಮಾತುಕತೆಯ ಮೂಲಕ ಮತ್ತೆ ಒಂದಾಗುವ ಅವಕಾಶವನ್ನೂ ಈ ಮಸೂದೆ ಕಲ್ಪಿಸಿದೆ. ಆದರೆ ಈ ವೇಳೆ ಮ್ಯಾಜಿಸ್ಟ್ರೇಟ್ ಕೆಲವೊಂದು ನಿಬಂಧನೆಗಳನ್ನು ಹಾಕಬಹುದು.
5 ಡೈವೋರ್ಸ್ಗೆ ಒಳಗಾದ ಮಹಿಳೆ ಮತ್ತು ಆಕೆಯ ಮಕ್ಕಳ ಜೀವನಾಂಶಕ್ಕಾಗಿ ಗಂಡ ಹಣ ನೀಡಬೇಕು. ಎಷ್ಟು ನೀಡಬೇಕು ಎಂಬುದನ್ನು ಮ್ಯಾಜಿಸ್ಟ್ರೇಟ್ ನಿರ್ಧರಿಸುತ್ತಾರೆ.
6 ಮಹಿಳೆ ಅಪ್ತಾಪ್ತ ವಯಸ್ಸಿನ ಮಕ್ಕಳನ್ನು ತನ್ನಲ್ಲೇ ಇರಿಸಿಕೊಳ್ಳುತ್ತೇನೆ ಎಂದು ಕೇಳಿದಲ್ಲಿ ಮ್ಯಾಜಿಸ್ಟ್ರೇಟ್ ಅವರು ಆಕೆಯ ವಶಕ್ಕೆ ನೀಡಬಹುದು.






