janadhvani

Kannada Online News Paper

ಟಿಪ್ಪು ಜಯಂತಿ ರದ್ಧು: ವಚನ ಭ್ರಷ್ಟರಾದ ಸಿಎಂ- ಕಾಂಗ್ರೆಸ್ ಕಿಡಿ

ಬೆಂಗಳೂರು (ಜು.30): ದ್ವೇಷ ರಾಜಕಾರಣ ಮಾಡುವುದಿಲ್ಲವೆಂದು ಹೇಳಿದ 24 ಗಂಟೆಯೊಳಗೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಟಿಪ್ಪು ಜಯಂತಿಯನ್ನು ರದ್ದು ಮಾಡುವ ಮೂಲಕ ಸಿಎಂ ಬಿಎಸ್ ಯಡಿಯೂರಪ್ಪ ವಚನ ಭ್ರಷ್ಟರಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಟಿಪ್ಪು ಜಯಂತಿಯನ್ನು ರದ್ದು ಮಾಡಿ ನೂತನ ಬಿಜೆಪಿ ಸರ್ಕಾರ ಆದೇಶಿದೆ. ಈ ಕುರಿತು ಮಾತನಾಡಿರುವ ಸಿಎಂ ಯಡಿಯೂರಪ್ಪ, ಹಿಂದೆಲ್ಲಾ ಟಿಪ್ಪು ಜಯಂತಿ ಸಂದರ್ಭದಲ್ಲಿ ಅಲ್ಲಲ್ಲಿ ಗಲಾಟೆ, ಘರ್ಷಣೆಗಳಾಗಿತ್ತು. ಅದು ಪುನರಾವರ್ತನೆಯಾಗಬಾರದೆಂದು ಶಾಸಕರ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಯಂತಿ ಆಚರಣೆ ರದ್ದು ಮಾಡಲು ಮುಂದಾಗಿವೆ ಎಂದಿದ್ದಾರೆ.

ಸಿಎಂ ಯಡಿಯೂರಪ್ಪರ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಟಿಪ್ಪು ಜಯಂತಿ ರದ್ದು ಮಾಡಿದ್ದು ಅಪರಾಧ. ಟಿಪ್ಪು ಸುಲ್ತಾನ್ ಒಬ್ಬ ಅಲ್ಪಸಂಖ್ಯಾತ. ಮೈಸೂರು ರಾಜ್ಯದಲ್ಲಿ ರಾಜನಾಗಿ ಬ್ರಿಟಿಷರ ವಿರುದ್ಧ ಹೋರಾಡಿದವನು ಟಿಪ್ಪು. ಈ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸಲು ಅವರ ಜಯಂತಿಯನ್ನು ಆಚರಣೆ ಮಾಡಲು ತೀರ್ಮಾನ ಮಾಡಿದ್ದೆವು. ಇತಿಹಾಸದ ಅರಿವಿಲ್ಲದ ಬಿಜೆಪಿಯವರು ದುರುದ್ದೇಶದಿಂದ ಅಲ್ಪಸಂಖ್ಯಾತರ ದ್ವೇಷದಿಂದ ಈ ರೀತಿ ಮಾಡಿದ್ದಾರೆ ಎಂದು ಹರಿಹಾಯ್ದರು.

ಟಿಪ್ಪು ಜಯಂತಿ ಆಚರಣೆ ರದ್ದು ಮಾಡಿರುವ ಬಗ್ಗೆ ರೋಷನ್ ಬೇಗ್ ಉತ್ತರಿಸಬೇಕು. ಕಾಂಗ್ರೆಸ್ ಬಿಟ್ಟು ಬಿಜೆಪಿ ಬಾಗಿಲಲ್ಲಿ ನಿಂತಿರುವ ಬೇಗ್, ಈ ಬಗ್ಗೆ ಮಾತನಾಡಬೇಕು. ಬಿಜೆಪಿ ಸರ್ಕಾರ ಬಂದರೆ ಜಯಂತಿ ಆಚರಣೆ ನಿಷೇಧಿಸುತ್ತಾರೆ ಎಂದು ಗೊತ್ತಿತ್ತು. ಆದರೆ, ಇಷ್ಟು ಬೇಗ ಮಾಡುತ್ತಾರೆ ಎಂದು ಗೊತ್ತಿರಲಿಲ್ಲ ಎಂದು ಜಮೀರ್ ಅಹ್ಮದ್ ತಿಳಿಸಿದ್ದಾರೆ.

ಬಿಜೆಪಿ ಕೋಮುವಾದ ಪಕ್ಷ, ರಾಜಕೀಯ ಲಾಭಕ್ಕಾಗಿ ಜಯಂತಿ ಆಚರಣೆಗೆ ನಿಷೇಧ ಮಾಡಿದ್ದಾರೆ. ಧರ್ಮ ಸ್ವಾರ್ಥಕ್ಕೆ ಉಪಯೋಗ ಮಾಡುತ್ತಾ ಇದ್ದಾರೆ. ಇದರಲ್ಲಿ ಆಶ್ಚರ್ಯ ಏನಿಲ್ಲ ಇದು ಮೊದಲಿನಿಂದಲೇ ಗೊತ್ತಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

error: Content is protected !! Not allowed copy content from janadhvani.com