janadhvani

Kannada Online News Paper

ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ರದ್ದು- ಸಿಎಂ ಯಡ್ಯೂರಪ್ಪ ಆದೇಶ

ಬೆಂಗಳೂರು(ಜುಲೈ.30): ಮೈಸೂರು ಹುಲಿ ಎಂದೇ ಕರೆಯಲಾಗುವ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ರದ್ದುಗೊಳಿಸಿ ನೂತನ ಸಿಎಂ ಬಿ.ಎಸ್ ಯಡಿಯೂರಪ್ಪನವರು ಆದೇಶ ಹೊರಡಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ಟಿಪ್ಪು ಜಯಂತಿ ಆಚರಣೆಯನ್ನು ಬಿಜೆಪಿ ಅಧಿಕಾರಕ್ಕೇರಿದ ಕೂಡಲೇ ರದ್ದುಗೊಳಿಸಿದೆ. ಮಾಜಿ ಸ್ಪೀಕರ್ ಬೋಪಯ್ಯನವರು ಟಿಪ್ಪು ಜಯಂತಿಯನ್ನು ರದ್ದುಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದೀಗ ಬೋಪಯ್ಯನವರ ಮನವಿಗೆ ಸ್ಪಂದಿಸಿದ ಸಿಎಂ ಬಿ.ಎಸ್ ಯಡಿಯೂರಪ್ಪನವರು ಟಿಪ್ಪು ಜಯಂತಿ ರದ್ದುಗೊಳಿಸಿ ಆದೇಶ ಹೊರಡಿಸಿದ್ಧಾರೆ.

ಸಿದ್ದರಾಮಯ್ಯ ನೇತೃತ್ವ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ಟಿಪ್ಪು ಜಯಂತಿಯನ್ನು ಹಿಂದಿನ ಸಿಎಂ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವೂ ಮುಂದುವರೆಸಿತ್ತು. ಟಿಪ್ಪು ಜಯಂತಿ ಆಚರಣೆ ಕೈಬಿಡಬೇಕೆಂದು ಬಿಜೆಪಿ ಮುಖಂಡರು ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಆದರೆ, ಕರ್ನಾಟಕ ಸರ್ವಜನಾಂಗದ ಶಾಂತಿ ತೋಟ ಎಂದು ಕುವೆಂಪು ಹೇಳಿದ್ಧಾರೆ. ಅದರಂತೆಯೇ ಟಿಪ್ಪು ಜಯಂತಿ ಆಚರಿಸಿದ್ದೇವೆ ಎಂದು ಕುಮಾರಸ್ವಾಮಿ ಬಿಜೆಪಿಗೆ ಸಮಜಾಯಿಷಿ ನೀಡಿದ್ದರು.

ಬಿಜೆಪಿ ಸೇರಿದಂತೆ ಸಂಘಪರಿವಾರ ಮುಖಂಡರು ಟಿಪ್ಪು ಜಯಂತಿ ಆಚರಿಸದಂತೆ ಹಿಂದಿನಿಂದಲೂ ಸರ್ಕಾರಗಳ ಮೇಲೆ ಒತ್ತಡ ಹಾಕುತ್ತಲೇ ಇದ್ದರು. ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಿಸಿದರೆ ಅದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದ್ದರು.