janadhvani

Kannada Online News Paper

ಖತಾರ್: ಕಾಲ್ನಡಿಗೆ ಯಾತ್ರಿಕರೇ ಎಚ್ಚರ- ಕಠಿಣ ನಿಯಮಗಳು ಜಾರಿಗೆ

ದೋಹಾ: ಕತರ್‌ನಲ್ಲಿ ಕಾಲ್ನಡಿಗೆ ಯಾತ್ರಿಕರಿಗೆ ಇರುವ ನಿಯಮಗಳನ್ನು ಕಠಿಣಗೊಳಿಸುವುದರ ಭಾಗವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ. ಆಗಸ್ಟ್‌ ಒಂದರಿಂದ ಹೊಸ ನಿಯಮಗಳು ಜಾರಿಗೆ ಬರಲಿದೆ.

ಕಾಲ್ನಡಿಗೆ ಯಾತ್ರಿಕರ ಟ್ರಾಫಿಕ್ ಉಲ್ಲಂಘನೆಗಳಿಗೆ ದಂಡವನ್ನು ಕಠಿಣಗೊಳಿಸುವ ಭಾಗವಾಗಿ ಅಲ್ಲಿನ ಟ್ರಾಫಿಕ್ ಕಂಟ್ರೋಲ್ ಖಾತೆಯು ಜಾಗೃತಿ ಕಾರ್ಯಾಗಾರಗಳನ್ನು ಪ್ರಾರಂಭಿಸಿದೆ. ಇದರ ಅಂಗವಾಗಿ ಕಡಲ ಕಿನಾರೆ ಮುಂತಾದೆಡೆಯ ಜನರಿಗೆ ಪ್ರತ್ಯೇಕವಾದ ನಿರ್ದೇಶನ, ಎಚ್ಚರಿಕೆಗಳನ್ನು ನೀಡಿದೆ.

ವಿದೇಶಿ ಕಾರ್ಮಿಕರಿಗೆ ಪ್ರತ್ಯೇಕ ಸುರಕ್ಷಾ ವಸ್ತ್ರಗಳನ್ನು ನೀಡಲಾಗಿದೆ. ಅದೇ ರೀತಿ ಹೈವೇಯ  ಇಂಟರ್ಸೆಕ್ಷನ್‌ಗಳನ್ನು ಹೇಗೆ ದಾಟಬಹುದು ಎನ್ನುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅದೇ ರೀತಿ ವಿದೇಶಿ ಕಾರ್ಮಿಕರಿಗೆ ರಸ್ತೆ ದಾಟುವ ವೇಳೆ ಧರಿಸಬೇಕಾದ ಜಾಕೆಟ್ ಗಳನ್ನು ವಿತರಿಸಲಾಗಿದೆ.

ವಾಹನ ಚಲಾಯಿಸುವವರಿಗೆ ದೂರದಿಂದಲೇ ಗೋಚರಿಸುವ ರೀತಿಯಲ್ಲಿ ಈ ಜಾಕೆಟ್‌ಗಳನ್ನು ವಿನ್ಯಾಸ ಗೊಳಿಸಲಾಗಿದ್ದು, ಪ್ರಥಮ ಹಂತವಾಗಿ ಜಾಕೆಟ್‌ಗಳನ್ನು ವಿದೇಶೀ ಕಾರ್ಮಿಕರಿಗೆ ವಿತರಿಸಲಾಗಿದೆ. ದೇಶಕ್ಕೆ ಸಂದರ್ಶನಕ್ಕಾಗಿ ಆಗಮಿಸಿದವರ ಮಧ್ಯೆಯೂ ಜಾಗೃತಿ ಮೂಡಿಸಲಾಗುತ್ತಿದೆ.

ಅಪಘಾತ ರಹಿತ ಬೇಸಿಗೆಕಾಲ ಎನ್ನುವ ಯೋಜನೆಯ ಭಾಗವಾಗಿ ಈ ಜಾಗೃತಿ ಕಾರ್ಯಕ್ರಮ ಎನ್ನಲಾಗಿದ್ದು, ಆಗಸ್ಟ್‌ ಒಂದರಿಂದ ಇದು ಜಾರಿಯಾಗಲಿದೆ. ಟ್ರಾಫಿಕ್ ನಿಶಾನೆಗಳನ್ನು ಉಲ್ಲಂಘಿಸಿ ರಸ್ತೆ ದಾಟುವುದು ಕಂಡು ಬಂದಲ್ಲಿ ಇನ್ನು ಮುಂದೆ 500 ರಿಯಾಲ್ ದಂಡ ವಿಧಿಸಲಾಗುತ್ತದೆ.

ಸೈನಿಕ ಪರೇಡ್ ಮುಂತಾದ ಸಂದರ್ಭಗಳಲ್ಲಿ ಟ್ರಾಫಿಕ್ ಅಧಿಕಾರಿಗಳ ನಿರ್ದೇಶನಗಳನ್ನು ಉಲ್ಲಂಘಿಸುವವರೂ ಇದೇ ದಂಡವನ್ನು ಪಾವತಿಸಬೇಕಾಗುತ್ತದೆ. ಝೀಬ್ರಾ ಲೈನ್ ಇಲ್ಲದ ಕಡೆ ರಸ್ತೆ ದಾಟಿದರೆ 200 ರಿಯಾಲ್ ದಂಡ ಪಾವತಿಸಬೇಕಾಗುತ್ತದೆ. ರಸ್ತೆಗಳ ಮಧ್ಯೆ ಡಿವೈಡರ್‌ಗಳಲ್ಲಿ ನಡೆದಾಡುವುದು ಕಂಡು ಬಂದರೆ ನೂರು ರಿಯಾಲ್ ದಂಡ ವಿಧಿಸಲಾಗುವುದು.

ಆಗಸ್ಟ್ ಒಂದರಿಂದ ಕಾಲ್ನಡಿಗೆ ಯಾತ್ರಿಕರ ಚಲನವಲನಗಳನ್ನು ಪ್ರತ್ಯೆಕ ಅಧಿಕಾರಿಗಳು ನಿರೀಕ್ಷಿಸಲಿದ್ದು, ಉಲ್ಲಂಘನೆ ಕಂಡುಬಂದರೆ ದಾಖಲಿಸಲಿದ್ದಾರೆ. ದೇಶದಲ್ಲಿ ಉಂಟಾಗುವ ಅಫಘಾತ ಸಾವುಗಳ ಪೈಕಿ ಹೆಚ್ಚಿನವು ಕಾಲ್ನಡಿಗೆ ಯಾತ್ರಿಕರದ್ದಾಗಿದ್ದು, ಆ ಕಾರಣಕ್ಕಾಗಿ ಸಚಿವಾಲಯ ರಸ್ತೆ ನಿಯಮಗಳನ್ನು ಕಠಿಣಗೊಳಿಸಿದೆ. ಮದೀನಾ ಖಲೀಫ, ಅಲ್ ರಯ್ಯಾನ್, ಅಲ್ ಮಾಮೂರಾ, ಓಲ್ಡ್ ಏರ್ಪೋರ್ಟ್ ಮುಂತಾದೆಡೆ ಇಂತಹ ಹೆಚ್ಚಿನ ಅಫಘಾತಗಳು ದಾಖಲಾಗಿದೆ.

error: Content is protected !! Not allowed copy content from janadhvani.com