janadhvani

Kannada Online News Paper

ರಾಜೀನಾಮೆ ನೀಡಿದ ಎಲ್ಲಾ ಅತೃಪ್ತ ಶಾಸಕರು ಅನರ್ಹರು- ಸ್ಪೀಕರ್ ಆದೇಶ

ಬೆಂಗಳೂರು (ಜು. 28): ಈಗಾಗಲೇ ಮೂವರು ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದ ಸ್ಪೀಕರ್ ರಮೇಶ್ ಕುಮಾರ್ ಇದೀಗ ಉಳಿದ 14 ಅತೃಪ್ತ ಶಾಸಕರನ್ನೂ ಅನರ್ಹಗೊಳಿಸುವ ಮೂಲಕ ರೆಬೆಲ್ಸ್​ಗೆ ಶಾಕ್ ನೀಡಿದ್ದಾರೆ.

ಈಗಾಗಲೇ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕರನ್ನು ಅನರ್ಹಗೊಳಿಸುವಂತೆ ಮನವಿ ಮಾಡಿದ್ದರು. ಆ ದೂರನ್ನು ಪರಿಶೀಲಿಸಿ ಈಗಾಗಲೇ ಮೂವರನ್ನು ಅನರ್ಹಗೊಳಿಸಲಾಗಿದೆ. ಉಳಿದ ಎಲ್ಲ ಶಾಸಕರನ್ನೂ ಇಂದಿನಿಂದ ಈ ವಿಧಾನಸಭಾ ಅವಧಿ ಮುಗಿಯುವವರೆಗೆ ಅನರ್ಹಗೊಳಿಸಲಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಆದೇಶ ನೀಡುವ ಮೂಲಕ ಶಾಕ್ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸ್ಪೀಕರ್ ರಮೇಶ್ ಕುಮಾರ್, ರಾಜೀನಾಮೆ ನೀಡಿರುವ ಅತೃಪ್ತ ಶಾಸಕರಾದ ಪ್ರತಾಪಗೌಡ ಪಾಟೀಲ್, ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜು, ಶಿವರಾಮ್ ಹೆಬ್ಬಾರ್, ಬಿ.ಸಿ. ಪಾಟೀಲ್, ಮುನಿರತ್ನ, ರೋಷನ್ ಬೇಗ್, ಡಾ. ಸುಧಾಕರ್, ಎಂಟಿಬಿ ನಾಗರಾಜ್, ಕೆ. ಗೋಪಾಲಯ್ಯ, ನಾರಾಯಣಗೌಡ, ಆನಂದ್ ಸಿಂಗ್, ಹೆಚ್. ವಿಶ್ವನಾಥ್, ಶ್ರೀಮಂತ ಪಾಟೀಲ್ ಅವರನ್ನು ಅನರ್ಹಗೊಳಿಸಿರುವುದಾಗಿ ಸ್ಪೀಕರ್ ಘೋಷಿಸಿದ್ದಾರೆ. ಕಾಂಗ್ರೆಸ್​ನ 11 ಮತ್ತು ಜೆಡಿಎಸ್​ನ ಮೂವರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿರುವುದಾಗಿ ಘೋಷಿಸಿದ್ದಾರೆ. ಅಲ್ಲಿಗೆ ಒಟ್ಟು 17 ಶಾಸಕರನ್ನೂ ಸ್ಪೀಕರ್ ಅನರ್ಹಗೊಳಿಸಿದ್ದಾರೆ.

ಸುದ್ದಿಗೋಷ್ಠಿಗೂ ಮುನ್ನ ಇಂದು ಮುಂಜಾನೆ ಕೊನೆಯುಸಿರೆಳೆದ ಕೇಂದ್ರದ ಮಾಜಿ ಸಚಿವ ಜೈಪಾಲ್ ರೆಡ್ಡಿ ಅವರನ್ನು ನೆನೆದು ಸ್ಪೀಕರ್ ರಮೇಶ್ ಕುಮಾರ್ ಭಾವುಕರಾದರು. ನನ್ನ ವೈಯಕ್ತಿಕ ಜೀವನದಲ್ಲಿ ಜೈಪಾಲ್ ರೆಡ್ಡಿ ಅವರ ಪ್ರಭಾವ ಅತ್ಯಂತ ಹೆಚ್ಚಾಗಿದೆ. ನನ್ನ ರಾಜಕೀಯ ಜೀವನಕ್ಕೆ ಅವರ ಕೊಡುಗೆ ಅಪಾರ. ಅವರಂತಹ ವ್ಯಕ್ತಿ ಈ ದೇಶದಲ್ಲಿದ್ದರಾ? ಎಂಬ ಆಶ್ಚರ್ಯ ಉಂಟಾಗುತ್ತದೆ ಎಂದಿದ್ದಾರೆ.