ಅಬುಧಾಬಿ: ದುಬೈಯ ನಂತರ ಅಬುಧಾಬಿಯಲ್ಲೂ ಪ್ರಧಾನ ರಸ್ತೆಗಳಲ್ಲಿ ಸುಂಕ ವಸೂಲಿ ಏರ್ಪಡಿಸಲಾಗುತ್ತಿದ್ದು, ಅಕ್ಟೋಬರ್ 15ರಿಂದ ಜಾರಿಗೆ ಬರಲಿದೆ. ಅಬುಧಾಬಿ ನಗರ ನಾಲ್ಕು ಕಡೆ ಸಾಲಿಕ್ ಟೋಲ್ ಎನ್ನುವ ಸುಂಕ ವಸೂಲಾತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಶೈಖ್ ಝಾಯಿದ್ ಸೇತುವೆ, ಶೈಖ್ ಖಲೀಫಾ ಸೇತುವೆ, ಮುಸಫ್ಫ ಸೇತುವೆ, ಅಲ್ ಮಖ್ತ ಸೇತುವೆ ಮುಂತಾದೆಡೆ ಕೇಂದ್ರಗಳನ್ನು ತೆರೆಯಲಾಗುತ್ತದೆ.
ದಟ್ಟಣೆಯ ಸಮಯದಲ್ಲಿ ವಾಹನಗಳು ಸಂಚರಿಸುವಾಗ ನಾಲ್ಕು ದಿರ್ಹಂ ವಸೂಲಿ ಮಾಡಲಾಗುತ್ತದೆ. ಸೀಝನ್ ಅಲ್ಲದ ಸಮಯ, ರಜಾ ದಿನಗಳು ಮತ್ತು ಶುಕ್ರವಾರ ಎರಡು ದಿರ್ಹಂ ಪಾವತಿಸ ಬೇಕು. ದಿನವಹಿ ಕಡಿಮೆ ಪಕ್ಷ ಒಂದು ವಾಹನಕ್ಕೆ 16 ದಿರ್ಹಂ ವಸೂಲಿ ಮಾಡಲಾಗುತ್ತದೆ. ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಬುಧಾಬಿ ನೋಂದಣಿ ಇರುವ ವಾಹನಗಳಿಗೆ ಆಗಸ್ಟ್ ಮೂವತ್ತರಿಂದ ಪ್ರಕ್ರಿಯೆ ಆರಂಭವಾಗಲಿದ್ದು, ಹೊರಗಿನ ವಾಹನಗಳು ಹಾದು ಹೋಗುವಾಗ ಸಾಲಿಕ್ ಗೇಟ್ನಲ್ಲಿ ನೋಂದಣಿ ಮಾಡಬೇಕು. ಸಾಲಿಕ್ ಇಲ್ಲದೆ ಹಾದು ಹೋಗುವ ಅಬುಧಾಬಿ ನೋಂದಣಿ ವಾಹನಗಳಿಗೆ ಹತ್ತು ದಿನಗಳ ವರೆಗೆ ವಿನಾಯಿತಿ ಲಭಿಸಲಿದೆ. ಅದರೊಳಗೆ ನೋಂದಣಿ ಮಾಡಿಸಿ ಸುಂಕ ನೀಡದಿದ್ದರೆ ದಂಡ ಪಾವತಿಸಬೇಕು. ಪ್ರಥಮ ದಿನ 100, ಎರಡನೇ ದಿನ 200, ಮೂರನೇ ದಿನ 400, ಹೀಗೆ ದಂಡದ ಮೊತ್ತ ಹಿಮ್ಮಡಿಯಾಗಲಿದೆ.
ಅಬುಧಾಬಿಯ ಹೊರಗಿನ ವಾಹನಗಳು ವಿನಾಯಿತಿ ದಿನಗಳ ಬಳಿಕ ದಿನವಹಿ 50 ದಿರ್ಹಂ ಲೆಕ್ಕದಲ್ಲಿ ದಂಡ ಪಾವತಿಸಬೇಕು. ಆ್ಯಂಬುಲೆನ್ಸ್, ನೋಂದಾಯಿತ ಟಾಕ್ಸಿಗಳು ಮುಂತಾದವುಗಳಿಗೆ ಸುಂಕ ವಿನಾಯಿತಿ ಇದೆ. ಪ್ರಸಕ್ತ ದುಬೈನಲ್ಲಿ ಏಳು ಸಾಲಿಕ್ ಸುಂಕ ವಸೂಲಿ ಕೇಂದ್ರಗಳು ಕಾರ್ಯಾಚರಿಸುತ್ತಿದೆ.






