ಬೆಂಗಳೂರು: ನಾಲ್ಕನೇ ಬಾರಿ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿಂದು ಮುಖ್ಯಮಂತ್ರಿಯಾಗಿ ಬಿಎಸ್ವೈ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು, ಬಿಎಸ್ವೈಗೆ ರಾಜ್ಯಪಾಲ ವಜುಭಾಯ್ವಾಲ ಪ್ರತಿಜ್ಞಾವಿಧಿ ಬೋಧಿಸಿದರು.
ಇದಕ್ಕೂ ಮುನ್ನ ಯಡಿಯೂರಪ್ಪ ಕಾಡುಮಲ್ಲೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ರು. ತದನಂತರ ಬಿಜೆಪಿ ಕಚೇರಿಗೆ ಭೇಟಿ ನೀಡಿ ಮಾತನಾಡಿದ್ದು, ಒಂದು ವರ್ಷದಿಂದ ಜನ ಈ ದೋಸ್ತಿ ಸರ್ಕಾರವನ್ನ ಕೆಳಗಿಳಿಸಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದನ್ನ ಕಾಯುತ್ತಿದ್ದರು. ಇದೀಗ ಆ ಘಳಿಗೆ ಸಮೀಪಿಸಿದೆ. ಸೇಡಿನ ರಾಜಕಾರಣ ಮಾಡದೇ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆಂದು ಹೇಳಿದರು.
ಯಡಿಯೂರಪ್ಪ ಪ್ರಮಾಣವಚನ ಸಮಾರಂಭಕ್ಕೆ ಬಿಜೆಪಿ ಕಾರ್ಯಕರ್ತರು, ಶಾಸಕರೆಲ್ಲ ಸೇರಿ ಹಲವರು ಭಾಗಿಯಾಗಿದ್ದರು. ಮಾಜಿ ಸಿಎಂ ಎಸ್.ಎಂ.ಕೃಷ್ಣ, ಬಿ.ಎಲ್.ಸಂತೋಷ್, ಸಿ.ಪಿ.ಯೋಗೇಶ್ವರ್, ಶ್ರೀರಾಮುಲು, ಶೋಭಾ ಕರಂದ್ಲಾಜೆ, ಕೆ.ಎಸ್.ಈಶ್ವರಪ್ಪ, ವಿ.ಸೋಮಣ್ಣ, ಮಾದುಸ್ವಾಮಿ, ನಳೀನ್ ಕುಮಾರ್ ಕಟೀಲ್, ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ ಸೇರಿ ಹಲವರು ಭಾಗಿಯಾಗಿದ್ದರು. ಇನ್ನು ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜಭವನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇನ್ನು ಕಾಂಗ್ರೆಸ್ ರೆಬೆಲ್ ಶಾಸಕ ರೋಷನ್ ಬೇಗ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಕಂಡುಬಂತು.






