ರಾಂಚಿ (ಜು.26): ಮುಸ್ಲಿಂ ಶಾಸಕನಿಗೆ ಒತ್ತಾಯಪೂರ್ವಕವಾಗಿ ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಸಚಿವರೊಬ್ಬರು ಒತ್ತಾಯಿಸಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಸಚಿವರ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿವೆ.
ವಿಧಾನಸಭೆ ಅಧಿವೇಶನದ ಬಳಿಕ ಹೊರ ಬಂದ ಸಚಿವ ಸಿಪಿ ಸಿಂಗ್, ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ಕೈ ಹಿಡಿದು ಒತ್ತಾಯಪೂರ್ವಕ ಧ್ವನಿಯಲ್ಲಿ ಜೈ ಶ್ರೀ ರಾಮ್ ಎಂದು ಹೇಳುವಂತೆ ಒತ್ತಾಯಿಸಿದ್ದಾರೆ. ಬಳಿಕ ಇರ್ಫಾನ್ ಕುಟುಂಬದ ಪೂರ್ವಜರು ರಾಮನ ಭಕ್ತರು, ಬಾಬರ್ನ ಭಕ್ತರಲ್ಲ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಇರ್ಫಾನ್, ರಾಮನ ಹೆಸರನ್ನು ನೀವು ಭಯದಿಂದ ಬಳಸುತ್ತಿದ್ದೀರಾ, ನಿಮ್ಮ ಜನರು ರಾಮನ ಹೆಸರು ಎತ್ತಲು ಭಯಪಡುತ್ತಿದ್ದಾರೆ. ಉದ್ಯೋಗ, ವಿದ್ಯುತ್, ಒಳಚಂರಡಿ ನಮ್ಮ ಅವಶ್ಯಕತೆ ಎಂದು ತಿರುಗೇಟು ನೀಡಿದ್ದಾರೆ.
ನಾನು ನಿಮಗೆ ಹೆದರಿಸುತ್ತಿಲ್ಲ. ನಿಮ್ಮ ಪೂರ್ವಜರು ರಾಮನ ಹೆಸರನ್ನು ಬಳಸುತ್ತಿದ್ದರೂ ಎಂಬುದನ್ನು ಮರೆಯಬೇಡಿ. ತೈಮೂರ್, ಬಾಬರ್, ಘಜ್ನಿ ಇವರು ನಿಮ್ಮ ಪೂರ್ವಜರಲ್ಲ. ಶ್ರೀರಾಮನ ಭಕ್ತರು ನಿಮ್ಮ ಪೂರ್ವಜನರು ಎಂದು ಸಿಂಗ್ ಹೇಳಿದರು.
ಜಾರ್ಖಂಡ್ನಲ್ಲಿ ಪ್ರಸ್ತುತ ಬಿಜೆಪಿ ಸರ್ಕಾರವಿದ್ದು ಸಿಪಿ ಸಿಂಗ್ ನಗರಾಭಿವೃದ್ಧಿ, ವಸತಿ ಹಾಗೂ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇರ್ಫಾನ್ ಅನ್ಸಾರಿ ಇರ್ಫಾನ್ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ.
ಜಾರ್ಖಂಡ್ನಲ್ಲಿ ಇತ್ತೀಚೆಗೆ ಜೈ ಶ್ರೀ ರಾಮ್ ಘೋಷಣೆ ಕೂಗುವಂತೆ ಒತ್ತಾಯ, ಬೆದರಿಕೆಗಳು ಹೆಚ್ಚಾಗಿದೆ. ಕಳೆದ ತಿಂಗಳು ಶ್ರೀ ರಾಮ್ ಘೋಷಣೆ ಹೇಳಲಿಲ್ಲ ಎಂದು ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬನನ್ನು ಹಲವು ಜನರು ಹೊಡೆದು ಹತ್ಯೆಗೆಯ್ದಿದ್ದರು.






