ನಾಸಿಕ್, ಜು.2: ಜಾರ್ಖಂಡ್ ನಲ್ಲಿ 24 ವರ್ಷದ ತಬ್ರೇಝ್ ಅನ್ಸಾರಿಯ ಗುಂಪು ಥಳಿತ ಹಾಗೂ ಹತ್ಯೆಯ ಹಿನ್ನಲೆಯಲ್ಲಿ ಮಾಲೆಗಾಂವ್ ನ ಹುತಾತ್ಮರ ಸ್ಮಾರಕ (ಶಹೀದೋಂ ಕಿ ಯಾದ್ ಗಾರ್) ಸಮೀಪ ಸೋಮವಾರ ಒಂದು ಲಕ್ಷಕ್ಕೂ ಮಿಕ್ಕ ಮುಸ್ಲಿಮರು ಒಗ್ಗೂಡಿ ಗುಂಪು ಥಳಿತದ ವಿರುದ್ಧ ಕಾನೂನು ಜಾರಿಗೊಳಿಸುವಂತೆ ಸರಕಾರದ ಮೇಲೆ ಒತ್ತಡ ಹೇರಿದ್ದಾರೆ. ಸರಿಯಾಗಿ 97 ವರ್ಷಗಳ ಹಿಂದೆ ಬ್ರಿಟಿಷರು ಏಳು ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಿದ ಸ್ಥಳ ಈ ಸ್ಮಾರಕವಾಗಿದೆ.
ಗುಂಪು ಥಳಿತದ ವಿರುದ್ಧ ಸಮುದಾಯ ಆಯೋಜಿಸಿದ ಮೊದಲ ರ್ಯಾಲಿ ಇದೆಂದು ಬಣ್ಣಿಸಲಾಗಿದ್ದು, ತಬ್ರೇಝ್ ಅನ್ಸಾರಿಯ ಗುಂಪು ಥಳಿತ ಹಾಗೂ ಹತ್ಯೆ ಘಟನೆಯೇ ಈ ಪ್ರತಿಭಟನೆಗೆ ನಾಂದಿಯಾಯಿತು ಎಂದು ಸಂಘಟನಾ ಸಂಸ್ಥೆ ಜಮೀಯತ್ ಉಲಮಾ ಹೇಳಿದೆ.
“ಸಂವಿಧಾನದ ರಕ್ಷಣೆಗೆ ಈ ಪ್ರತಿಭಟನೆ ನಡೆಸಲಾಗಿದೆ, ನಮಗೆ ದ್ವೇಷ ಸಾಧಿಸುವುದು ಬೇಕಿಲ್ಲ. ಹಿಂಸೆಯಲ್ಲೂ ನಮಗೆ ನಂಬಿಕೆಯಿಲ್ಲ. ಕಾನೂನಿನ ಮೇಲೆ ನಂಬಿಕೆಯಿದೆ” ಎಂದು ಪ್ರತಿಭಟನಕಾರರು ಹೇಳಿದರು.
ಮಾಲೆಗಾಂವ್ ಫೋರ್ಟ್ ಪ್ರದೇಶದಲ್ಲಿ ಒಟ್ಟು ಸೇರಿದ ಪ್ರತಿಭಟನಾಕಾರರು ನಂತರ ಹುತಾತ್ಮರ ಸ್ಮಾರಕದತ್ತ ನಡೆದರು. “ಮುಸ್ಲಿಮರು ದೌರ್ಜನ್ಯವನ್ನು ಹೆಚ್ಚು ಕಾಲ ತಾಳಿಕೊಳ್ಳಲು ಸಾಧ್ಯವಿಲ್ಲ ಎಂದು ಇಡೀ ದೇಶಕ್ಕೆ ಹೇಳಲು ಈ ಐತಿಹಾಸಿಕ ರ್ಯಾಲಿ ಸಾಕು. ಗುಂಪು ಥಳಿತ ಒಂದು ಸಂಘಟಿತ ಕೊಲೆ ಹಾಗೂ ಅದನ್ನು ಯೋಜನಾಬದ್ಧವಾಗಿ ನಡೆಸಲಾಗುತ್ತಿದೆ. ಇಂದು ಎಲ್ಲಾ ನಾಗರಿಕರೂ ಇಂತಹ ಘಟನೆಗಳಿಗೆ ಅಂತ್ಯ ಹಾಡುವ ಜವಾಬ್ದಾರಿ ಹೊಂದಿದ್ದಾರೆ. ಸೀತೆಯ ಈ ಪಾವನ ಭೂಮಿಯಲ್ಲಿ ನಾವು ರಾವಣನ ಹೆಜ್ಜೆಯ ಸದ್ದು ಕೇಳುತ್ತಿದ್ದೇವೆ. ಇದನ್ನು ನಿಲ್ಲಿಸುವುದು ನಮ್ಮ ಸಂಘಟಿತ ಜವಾಬ್ದಾರಿ” ಎಂದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯದರ್ಶಿ ಮೌಲಾನ ರಹ್ಮಾನಿ ಹೇಳಿದರು.
ರಾಷ್ಟ್ರಪತಿಗಳು ಎಲ್ಲಾ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತಗಳಿಗೆ ಪತ್ರ ಬರೆದು ಗುಂಪು ಥಳಿತ ಘಟನೆಗಳ ಕುರಿತಂತೆ ಅವರ ಸಂವಿಧಾನಿಕ ಕರ್ತವ್ಯಗಳನ್ನು ನೆನಪಿಸಬೇಕು ಹಾಗೂ ಸರಕಾರ ಗುಂಪು ಥಳಿತ ಸಂತ್ರಸ್ತರ ಕುಟುಂಬಗಳಿಗೆ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಮಹಾರಾಷ್ಟ್ರ ಸರಕಾರಕ್ಕೆ ಸಲ್ಲಿಸಿದ ಪತ್ರದಲ್ಲಿ ಆಗ್ರಹಿಸಲಾಗಿದೆ.