ಸೀತಾಪುರ್ ಮೆ 1- ಭ್ರಷ್ಟಾಚಾರ ಮತ್ತು ಇತರ ಸಮಸ್ಯೆಗಳ ವಿರುದ್ಧ ಸಮರ್ಥ ಹೋರಾಟ ಮಾಡುವಲ್ಲಿ 56 ಇಂಚಿನ ಎದೆಯ ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.
ಕಳೆದ ಐದು ವರ್ಷಗಳ ಮೋದಿ ಆಳ್ವಿಕೆಯ ಅವಧಿಯಲ್ಲಿ ದೇಶದ ಜನರು ಅತ್ಯಂತ ಕೆಟ್ಟ ಪರಿಸ್ಥಿತಿ ಅನುಭವಿಸಿದ್ದಾರೆ. ಭ್ರಷ್ಟಾಚಾರ ಮೀತಿಮೀರಿದೆ ಮತ್ತು ರೈತರ ಆದಾಯ ಸಾಮಾನ್ಯ ಜನರ ಆದಾಯ ದ್ವಿಗುಣವೆಂದು ಮೋದಿ ನೀಡಿದ್ದ ಭರವಸಸೆಗಳೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಅವರು ಕಿಡಿಕಾರಿದರು.
ಕೇಂದ್ರದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಪ್ರತಿವರ್ಷ 22 ಲಕ್ಷ ಉದ್ಯೋಗ ಒದಗಿಸಲಾಗುವುದು. ದೇಶದ ಲ್ಲಿ 25 ಕೋಟಿ ಬಡವರಿಗೆ ಆದಾಯ ಕನಿಷ್ಠ ಖಾತ್ರಿ ಯೋಜನೆಯಡಿ ವಾರ್ಷಿಕ 72,000 ರೂ.ನೀಡಲಾಗುವುದು ಎಂದು ಭರವಸೆ ನೀಡಿದರು.
ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಯುವಕರು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಭ್ರಷ್ಟಾಚಾರ ಉತ್ತೇಜಿಸಲು ಮೋದಿ ಸರಕಾರ ಹಲವು ಹಗರಣ ಮಾಡಿತು. ಕೈಗಾರಿಕೋದ್ಯಮಿಗಳಿಗೆ ಲಾಭ ಮಾಡಿಕೊಡಲು ರಫೇಲ್ ವಿಮಾನ ಖರೀದಿ ಒಪ್ಪಂದ ಮಾಡಿಕೊಂಡಿರುವುದೇ ಇದಕ್ಕೆ ಉದಾಹರಣೆ ಎಂದರು.
ಮೋದಿ 15 ಕೈಗಾರಿಕೋದ್ಯಮಿಗಳ 5.55 ಲಕ್ಷ ಕೋಟಿ ರೂ ಸಾಲ ಮನ್ನಾ ಮಾಡಿದರು. ಆದರೆ ಒಂದೇ ಒಂದು ರೂಪಾಯಿ ರೈತರ ಸಾಲ ಮನ್ನಾ ಮಾಡಲಿಲ್ಲ. ದೆಹಲಿಗೆ ಬಂದ ರೈತರ ಕಷ್ಟವನ್ನು ಕೇಳಲಿಲ್ಲ. ಆದರೆ, ಮತ್ತೊಂದೆಡೆ ಜನರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿ ವಂಚನೆ ಮಾಡಿದ್ದಾರೆ.
ಜಿಎಸ್ ಟಿ ಹೆಸರಿನಲ್ಲಿ ಗಬ್ಬರ್ ಸಿಂಗ್ ತೆರಿಗೆ ಪದ್ಧತಿ ಜಾರಿಗೆ ತಂದಿದ್ದಾರೆ. ಪರಿಣಾಮ ಆರ್ಥಿಕತೆ ಮೇಲೆ ಕೆಟ್ಟ ಪರಿಣಾಮ ಬೀರಿ ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ. ಕೈಗಾರಿಕೆಗಳು ವಿಶೇಷವಾಗಿ ಸಣ್ಣ ಕೈಗಾರಿಕೆಗಳು ಬಾಗಿಲು ಹಾಕಿಕೊಂಡು ಅಳಿವಿನಂಚಿನಲ್ಲಿವೆ ಎಂದರು.
ಪ್ರಧಾನಮಂತ್ರಿ ತಮ್ಮೊಂದಿಗೆ 15 ನಿಮಿಷಗಳ ಕಾಲ ಚರ್ಚೆಗೆ ಬರಲಿ ಎಂದು ಮತ್ತೆ ಸವಾಲು ಹಾಕಿದ ಅವರು, ಭ್ರಷ್ಟಾಚಾರ ತಪ್ಪಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿರುವ ಕಾರಣ ಅವರು ಸವಾಲು ಸ್ವೀಕರಿಸಲು ಸಿದ್ಧರಿಲ್ಲ. ಪ್ರಧಾನಮಂತ್ರಿಯೊಂದಿಗೆ ಮುಕ್ತ ಚರ್ಚೆ ನಡೆದರೆ ಮೋದಿ ದೇಶವನ್ನು ಎದುರಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.