janadhvani

Kannada Online News Paper

ಆ ಒಂದು ಹೆಲ್ಮೆಟ್ ನನ್ನ ಪ್ರಾಣವನ್ನು ಉಳಿಸಿತು!

✒#ಸ್ನೇಹಜೀವಿ ಅಡ್ಕ

ಸರಿಸುಮಾರು ಎರಡು ವರ್ಷಗಳ ಹಿಂದೆ ಗೆಳೆಯ ಯಂಶನ ಮದುವೆಯ ಮುನ್ನಾ ದಿನ ರಾತ್ರಿ ಮನೆಯಿಂದ ಗೆಳೆಯನ ಮನೆಗೆ ಹೋಗುವಾಗ ಪುತ್ತೂರು ತಲುಪುತ್ತಿದ್ದಂತೆಯೇ ಮಳೆ ಬರುವ ಮುನ್ಸೂಚನೆ ಗೋಚರಿಸತೊಡಗಿದವು.
ಅದರೊಂದಿಗೆ ಆತ್ಮೀಯರಾದ ಕೆ.ಎಂ ಸಿದ್ಧೀಕ್ ಮೋಂಟುಗೋಳಿ ಉಸ್ತಾದರು ಉಪ್ಪಿನಂಗಡಿಗೆ ಕೆಲವೇ ನಿಮಿಷಗಳಲ್ಲಿ ತಲುಪುತ್ತೇನೆ ಅಂದರು.

ನಾನು ನನ್ನ ದ್ವಿಚಕ್ರ ವಾಹನದಲ್ಲಿ ತುಸು ವೇಗವಾಗಿಯೇ ಮಳೆ ಬರುವುದಕ್ಕಿಂತ ಮುಂಚಿತವಾಗಿ ಗೆಳೆಯನ ಮನೆಗೆ ತಲುಪಬೇಕು ಅನ್ನುವ ಉದ್ದೇಶದಿಂದ ಹೋಗುವಾಗ ದಾರಿ ಮಧ್ಯೆ ತುಂತುರು ಮಳೆ ಬರಲು ಪ್ರಾರಂಭಿಸತೊಡಗಿದವು.
ವೇಗವನ್ನು ಇನ್ನಷ್ಟು ಹೆಚ್ಚಿಸಿ ಹೋಗುವಾಗ ಉಪ್ಪಿನಂಗಡಿ ತಲುಪುವುದಕ್ಕಿಂತ ಸ್ವಲ್ಪ ಈ ಕಡೆ ಒಂದು ತಿರುವಿನಲ್ಲಿ ನನ್ನ ದ್ವಿಚಕ್ರ ವಾಹನವು ನಿಯಂತ್ರಣ ಸಿಗದೆ ಪಲ್ಟಿಹೊಡೆಯಿತು. ಬಿದ್ದ ರಭಸಕ್ಕೆ ನನ್ನ ತಲೆಯು ನೆಲಕ್ಕೆ ಬಡಿದು ಕೆಲವು ಮೀಟರ್ ಗಳಷ್ಟು ದೂರ ನನ್ನನ್ನು ಎಳೆದುಕೊಂಡು ಹೋಯಿತು.
ಅದೃಷ್ಟವಶಾತ್ ಹೆಲ್ಮೆಟ್ ಧರಿಸಿದ ಕಾರಣದಿಂದ ಯಾವುದೇ ಪ್ರಾಣಪಾಯವಾಗದೆ ಕೈ ಗೆ ಸ್ವಲ್ಪ ಗಾಯಗೊಂಡು ನಾನು ಪಾರಾಗಿದ್ದೆ ಅಲ್ – ಹಮ್ದುಲಿಲ್ಲಾಹ್!
ಯಾಕೆ ಈ ವಿಷಯವನ್ನು ಹಂಚಿಕೊಂಡೆ ಅಂದರೆ ಇವತ್ತು ಪುತ್ತೂರಿನ ಸರ್ಕಾರೀ ಆಸ್ಪತ್ರೆಯ ಶವಾಗಾರದಲ್ಲಿ ಒಂದು ಜನಾಝವನ್ನು ನೋಡಲು ಸಾಧ್ಯವಾಯಿತು. ಬೆಳ್ಳಾರೆ ಸಮೀಪ ನಡೆದ ಅಪಘಾತವೊಂದರಲ್ಲಿ ಯುವಕನೊಬ್ಬ ಮರಣಹೊಂದಿದ್ದ. ಕಳೆದೆರಡು ವರ್ಷಗಳಿಂದೀಚೆಗೆ ಹಲವು ಅಪಘಾತ ಪ್ರಕರಣದಲ್ಲಿ ಮರಣಹೊಂದಿದ ಜನಾಝವನ್ನು ಪುತ್ತೂರಿನ ಸರ್ಕಾರೀ ಆಸ್ಪತ್ರೆಯ ಶವಾಗಾರದಲ್ಲಿ ನೋಡುತ್ತಾ ಬಂದಿದ್ದರೂ, ಅದರಲ್ಲಿ ಬಹುತೇಕ ಜನಾಝಗಳೂ ಹದಿಹರೆಯದ ಯುವಕರದ್ದಾಗಿದ್ದವು.
ಅದರಲ್ಲಿ ಬಹುತೇಕ ಅಪಘಾತಗಳು ಕೂಡ ದ್ವಿಚಕ್ರ ವಾಹನಗಳಿಂದ ಸಂಭವಿಸಿದ್ದಾಗಿದೆ.
ಪ್ರತಿಯೊಂದು ಕೂಡ ತಲೆಯ ಭಾಗಕ್ಕೆ ಪೆಟ್ಟು ಬಿದ್ದು ಸಂಭವಿಸಿದ ಮರಣಗಳಾಗಿತ್ತು.

ಕಳೆದ ವರ್ಷ ನಡೆದ ಅಪಘಾತವೊಂದರಲ್ಲಿ ಮರಣ ಹೊಂದಿದ ಯುವಕನದ್ದು ಕೂಡ ತಲೆಯ ಭಾಗಕ್ಕೆ ಪೆಟ್ಟು ಬಿದ್ದು ಮರಣಹೊಂದಿದ್ದಾಗಿತ್ತು. ಶವ ಮಹಜರು ನಡೆಸಲು ಬಂದ ಪೋಲೀಸ್ ಅಧಿಕಾರಿಯೊಬ್ಬರು ಅಂದು ಹೇಳಿದ್ದರು ನಿಮ್ಮ ಸಮುದಾಯದ ಯುವಕರನೇಕರಿಗೆ ಹೆಲ್ಮೆಟ್ ಹಾಕದೆ ಸಂಚರಿಸುವುದು ಅಂದರೆ ಅದೇನೋ ಒಂದು ಸಾಧನೆ ಅಂತ ಅಂದುಕೊಂಡಿರಬೇಕು. ಹೆಲ್ಮೆಟ್ ಧರಿಸಿದ್ದರೆ ಈ ಯುವಕನೂ ಬದುಕುತ್ತಿರುತ್ತಿದ್ದನೇನೋ ಅಂತ!

ಪ್ರೀತಿಯ ಯುವಕರೇ,
ಇಂದಲ್ಲದಿದ್ದರೆ ನಾಳೆ ಮರಣ ಹೊಂದಲೇಬೇಕಾದವರು ನಾವೆಲ್ಲರೂ, ಆದರೆ ನಮ್ಮ ಜೀವನದಲ್ಲಿ ಜಾಗೃತೆಯನ್ನು ಪಾಲಿಸಿಕೊಂಡು ಜೀವಿಸಬೇಕಾದದ್ದು ನಮ್ಮ ಕರ್ತವ್ಯವಾಗಿದೆ. ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ವೇಗದ ಮಿತಿಯನ್ನು ದಾಟಿಕೊಂಡು ಹೆಲ್ಮೆಟ್ ಧರಿಸದೆ ಹೋಗುವಾಗ ನಿಮ್ಮ ಬರುವಿಕೆಗಾಗಿ ಕಾಯುವ ಹೆತ್ತವರು, ನಿಮ್ಮವರೆನಿಸಿಕೊಂಡವರು ಇದ್ದಾರೆ ಅನ್ನುವುದನ್ನು ನೆನಪಿಟ್ಟುಕೊಳ್ಳಿರಿ.ಸಾಧ್ಯವಾದಷ್ಟು ಜಾಗರೂಕತೆಯನ್ನು ಪಾಲಿಸಿಕೊಳ್ಳುವವರು ನೀವುಗಳಾಗಿರಿ.

error: Content is protected !! Not allowed copy content from janadhvani.com