janadhvani

Kannada Online News Paper

ಭಾರತದ ಮೊಟ್ಟ ಮೊದಲ ಲೋಕಪಾಲರಾಗಿ ಪಿನಾಕಿ ಚಂದ್ರ ಘೋಷ್ ಪ್ರಮಾಣವಚನ

ನವದೆಹಲಿ: ಭಾರತದ ಮೊಟ್ಟ ಮೊದಲ ಲೋಕಪಾಲರಾಗಿ ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಶನಿವಾರ ಪ್ರಮಾಣವಚನ ಸ್ವೀಕರಿಸಿದರು.

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಮಾಣವಚನ ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಮುಖ್ಯ ನ್ಯಾಯಮೂರ್ತಿ ರಂಜಾನ್ ಗೊಗೋಯ್’ ಸಮ್ಮುಖದಲ್ಲಿ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಪ್ರಮಾಣವಚನ ಸ್ವೀಕರಿಸಿದರು.

2017ರಲ್ಲಿ ಸುಪ್ರೀಂಕೋರ್ಟಿನಿಂದ ನಿವೃತ್ತಿಹೊಂದಿದ ಜಸ್ಟೀಸ್ ಘೋಷ್, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿದ್ದಾರೆ. ಇದಕ್ಕೂ ಮೊದಲು ಕೋಲ್ಕತ್ತಾದ ಹೈಕೋರ್ಟಿನ ಜಡ್ಜ್ ಹಾಗೂ ಆಂಧ್ರಪ್ರದೇಶ ಹೈಕೋರ್ಟಿನ ಮುಖ್ಯ ನ್ಯಾಯಮುರ್ತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಮಾರ್ಚ್ 15ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಪಿನಾಕಿ ಚಂದ್ರ ಘೋಷ್ ಅವರನ್ನು ಲೋಕಪಾಳರಾಗಿ ಆಯ್ಕೆ ಮಾಡಿ ಘೋಷಿಸಿತ್ತು. ಇವರೊಂದಿಗೆ ನ್ಯಾಯಮೂರ್ತಿ ದಿಲೀಪ್ ಬಿ ಬೊಸ್ಸಾಲೆ, ನ್ಯಾಯಮೂರ್ತಿ ಪಿ.ಕೆ.ಮೊಹಂತಿ, ನ್ಯಾಯಮೂರ್ತಿ ಅಭಿಲಾಶಾ ಕುಮಾರಿ ಮತ್ತು ನ್ಯಾಯಮೂರ್ತಿ ಎ.ಕೆ. ತ್ರಿಪಾಠಿ ಅವರನ್ನು ನ್ಯಾಯಾಂಗ ಸದಸ್ಯರಾಗಿ, ದಿನೇಶ್ ಕುಮಾರ್ ಜೈನ್, ಅರ್ಚನಾ ರಾಮಸುಂದರ್, ಮಹೇಂದರ್ ಸಿಂಗ್ ಮತ್ತು ಐ.ಪಿ.ಗೌತಮ್ ಅವರನ್ನು ಸದಸ್ಯರನ್ನಾಗಿ ನೇಮಿಸಿತ್ತು.

error: Content is protected !! Not allowed copy content from janadhvani.com