ಬೆಂಗಳೂರು,ಫೆ.9: ಆಪರೇಷನ್ ಕಮಲ ನಡೆಸಿರುವಂತೆ ಯಡಿಯೂರಪ್ಪ ವಿರುದ್ಧ ಆಡಿಯೋ ಸೃಷ್ಟಿಸಿ ಅವರ ಮೇಲೆ ಆರೋಪ ಮಾಡುವ ಅವಶ್ಯಕತೆ ನನಗೆ ಇಲ್ಲ. ಇದು ಮಿಮಿಕ್ರಿ ಎಂದು ಅವರು ದೂರುತ್ತಿದ್ದಾರೆ. ಈ ಆಡಿಯೋ ನಿಜವಾದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಈ ಆಡಿಯೋ ಬೋಗಸ್ ಅಥವಾ ಸೃಷ್ಟಿ ಎಂದು ಬಿಜೆಪಿಯವರು ಸಾಬೀತು ಮಾಡಿದರೆ ನಾನೇ ರಾಜಕೀಯದಿಂದ ನಿವೃತ್ತಿ ಘೋಷಿಸುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮರುಸವಾಲು ಹಾಕಿದರು.
ಧರ್ಮಸ್ಥಳ ದಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅಧಿಕಾರದ ದುರಾಸೆಯಿಂದ ಶಾಸಕರ ಮಗನನ್ನು ಮಧ್ಯರಾತ್ರಿ ಕರೆದು ಮಾತನಾಡಿದ್ದಾರೆ. ಲೈಟ್ ಆಫ್ ಮಾಡಿಸಿ ಮಾತನಾಡಿಸಿದ್ದಾರೆ. ಬೆಳಗ್ಗೆ ಮತ್ತೊಬ್ಬ ಶಾಸಕನಿಗೆ ಕರೆ ಮಾಡಿದ್ದಾರೆ. ಇದಕ್ಕೆ ಅಶ್ವತ್ಥ ನಾರಾಯಣ, ಯೋಗಿಶ್ವರ್ ಸೂತ್ರಧಾರರು. ಈ ರೀತಿ ಅರ್ಧ ರಾತ್ರಿ ಚರ್ಚಿಸುವ ಅವಶ್ಯಕತೆ ಏನಿತ್ತು ಎಂದು ಎಚ್ಡಿಕೆ ಪ್ರಶ್ನಿಸಿದರು.
ಆಡಿಯೋ ಪ್ರಕರಣ ಆದ್ಮೇಲೂ ತಮ್ಮನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ನಾಯಕರು ನನ್ನ ವಿರುದ್ಧವೇ ಬೊಟ್ಟು ಮಾಡಿದರು. ಕುಮಾರಸ್ವಾಮಿ ನಡೆಸಿದ ಪ್ರಹಸನ ಅಂತಾ ಹೇಳಿದರು. ನಾನು ಸಿನಿಮಾ ನಿರ್ಮಾಪಕ ಆಗಿರಬಹುದು. ಆ ಧ್ವನಿ ಯಾರದೆಂದು ಯಾರನ್ನೇ ಕೇಳಿದರೂ ಅದು ಯಡಿಯೂರಪ್ಪ ಧ್ವನಿ ಎಂದು ಹೇಳುತ್ತಾರೆ. ಹೀಗಿರುವಾಗ ತಪ್ಪನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಆಡಿಯೋಗೆ ಪ್ರತಿಯಾಗಿ ನನ್ನ ವಿರುದ್ಧ ವಿಡಿಯೋ ಬಿಡುಗಡೆ ಮಾಡುತ್ತೇನೆಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. 25 ಕೋಟಿ ಡೀಲ್ ಮಾಡಿರುವ ವಿಡಿಯೋ ಸದನದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ನಿನ್ನೆ ಅವರಿಗೆ ನಾನೇ ಜ್ಞಾಪಕ ಮಾಡಿದ್ದೇನೆ. ನಾನು ಬಾಗಿಲು ಹಾಕಿಕೊಂಡು ಮಾತನಾಡಿಲ್ಲ. 50 ಜನರ ಮುಂದೆ ಮಾತನಾಡಿದ್ದೇನೆ. ಈ ಬಗ್ಗೆ ಕಲಾಪದಲ್ಲಿ ನಾನೇ ಚರ್ಚೆ ಮಾಡೋದಾಗಿ ಹೇಳಿದ್ದೇನೆ. ಯಡಿಯೂರಪ್ಪ ತರ ಪಲಾಯನವಾದ ಮಾಡುವುದಿಲ್ಲ ಎಂದರು.