ನವದೆಹಲಿ: ವಂಚನೆ ಮಾಡಿ ದೇಶದಿಂದ ಹಾರಿ ಹೋಗುವವರ ನಿಯಂತ್ರಣಕ್ಕೆ ಪಾಸ್‌ಪೋರ್ಟ್ ಕಾನೂನು ಬಿಗಿಪಡಿಸುವ ಅಗತ್ಯಗಳ ಕುರಿತಾದ ಶಿಫಾರಸನ್ನು ಸಮಿತಿ ಗೃಹ ಸಚಿವಾಲಯಕ್ಕೆ ಸಲ್ಲಿಸಿದೆ.
ಮೆಹುಲ್ ಚೋಸ್ಕಿಯಂತೆ ಎರಡು ರಾಷ್ಟ್ರಗಳ ಪೌರತ್ವ ಹೊಂದಿರುವ ಪ್ರಕರಣಗಳಲ್ಲಿ ಅನುಸರಿಸಬೇಕಾದ ನಿಯಮ, ಕ್ರಮಗಳಲ್ಲಿ ಆಗಬೇಕಿರುವ ಬದಲಾವಣೆ ಸಂಬಂಧ ಗಮನಹರಿಸಲು ಗೃಹ ಸಚಿವಾಲಯ ಸಮಿತಿಯೊಂದನ್ನು ರೂಪಿಸಿತ್ತು. ಈ ಸಮಿತಿಯು ಆರ್ಥಿಕ ಸೇವೆಗಳ ಕಾರ್ಯದರ್ಶಿ ರಾಜಿವ್ ಕುಮಾರ್ ನೇತೃತ್ವದಲ್ಲಿ ಉಪ–ಸಮಿತಿ ರಚಿಸಿ ಭಾರತೀಯ ಪಾಸ್‌ಪೋರ್ಟ್ ಮತ್ತು ಉಭಯ ರಾಷ್ಟ್ರಗಳ ಪೌರತ್ವದ ವಿಷಯದಲ್ಲಿ ಅಗತ್ಯ ಬದಲಾವಣೆ ಬಯಸಿತ್ತು.
ಸಾಲ ಮತ್ತು ವಂಚನೆ ಪ್ರಕರಣಗಳಲ್ಲಿ ತಪ್ಪಿಸಿಕೊಂಡು ಭಾರತದಿಂದ ವಿದೇಶಗಳಿಗೆ ಹೋಗುವ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಸ್ಕಿ ಅಂಥವರನ್ನು ತಡೆಯಲು ಪಾಸ್‌ಪೋರ್ಟ್ ಕಾಯ್ದೆಯಲ್ಲಿ ತಿದ್ದುಪಡಿ ಅಗತ್ಯವನ್ನು ಸಮಿತಿ ಸೂಚಿಸಿದೆ.
ಅಮೆರಿಕದಿಂದ ವೆಸ್ಟ್ ಇಂಡೀಸ್‌ಗೆ ತೆರಳಿ ಸ್ಥಳೀಯ ಪಾಸ್‌ಪೋರ್ಟ್ ಪಡೆದು ದ್ವೀಪ ರಾಷ್ಟ್ರ ಆಂಟಿಗುವಾದಲ್ಲಿ ಮೆಹುಲ್ ಚೋಕ್ಸಿ ಅಡಗಿರುವ ಮಾಹಿತಿ ಹೊರಬಂದಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ 13,500 ಕೋಟಿ ರೂಪಾಯಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿಯ ಸಂಬಂಧಿ, ಈ ಮೆಹುಲ್ ಚೋಕ್ಸಿ. ಸದ್ಯ ಆಂಟಿಗುವಾ ಪಾಸ್‌ಪೋರ್ಟ್ ಹೊಂದಿರುವ ಚೋಕ್ಸಿ ವಿರುದ್ಧ ಯಾವುದೇ ಪ್ರಕರಣದ ಭಾರತದ ಆಡಳಿತ ಮಂಡಳಿಗಳು ಕ್ರಮವಹಿಸುವುದು ಕಠಿಣ ಕಾರ್ಯ. ಹಾಗಾಗಿಯೇ ಪಾಸ್‌ಪೋರ್ಸ್ ಕಾಯ್ದೆ ತಿದ್ದುಪಡಿ ಶಿಫಾರಸು ಮಹತ್ವ ಪಡೆದುಕೊಂಡಿದೆ.
ಜಾರಿ ನಿರ್ದೇಶನಾಯಲಯದ ಅಧಿಕಾರಿಗಳು, ಸಿಬಿಐ, ಇಂಟೆಲಿಜೆನ್ಸ್ ಬ್ಯೂರೊ, ಆರ್‌ಬಿಐ, ಗೃಹ ಸಚಿವಾಲಯ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳು ಸಮಿತಿಯ ಭಾಗವಾಗಿದ್ದಾರೆ.
50 ಕೋಟಿಗಿಂತಲೂ ಅಧಿಕ ಮೊತ್ತದ ಸಾಲ ಪಡೆದಿರುವವರ ಪಾಸ್‌ಪೋರ್ಟ್ ಮಾಹಿತಿ ಸಂಗ್ರಹಿಸುವಂತೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ವಿತ್ತ ಸಚಿವಾಲಯ ಸೂಚನೆ ನೀಡಿದೆ. 2016ರ ಮಾರ್ಚ್‌ನಲ್ಲಿ ವಿಜಯ್ ಮಲ್ಯಾ ದೇಶ ತೊರೆದಿದ್ದರು.