janadhvani

Kannada Online News Paper

ಯಲಹಂಕ ಮನೆ ಧ್ವಂಸ ಪ್ರಕರಣ: ಸರ್ಕಾರದ ತ್ವರಿತ ಸ್ಪಂದನೆ- ಶೀಘ್ರದಲ್ಲೇ ಪರಿಹಾರ ಕ್ರಮ

ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಹಾಗೂ ದಲಿತ ಸಮುದಾಯಗಳು ವಾಸಿಸುವ ಪ್ರದೇಶಗಳಿಂದ ಜನರನ್ನು ಕೊರೆಯುವ ಚಳಿಯ ನಡುವೆ ಸ್ಥಳಾಂತರಿಸಿರುವುದು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಹೇಳಿದ್ದಾರೆ.

ಬೆಂಗಳೂರು: ಯಲಹಂಕ ಸಮೀಪದ ಬಂಡೆ ರಸ್ತೆಯ ಫಕೀರ್ ಲೇಔಟ್ ಹಾಗೂ ವಾಸಿಮ್ ಲೇಔಟ್ ಕಾಲೋನಿಗಳಲ್ಲಿ ಮನೆಗಳ ಧ್ವಂಸ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವರಾದ ಬಿ. ಝಡ್. ಝಮೀರ್ ಅಹ್ಮದ್
ಮತ್ತು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಗಳಾದ ನಝೀರ್ ಅಹ್ಮದ್ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳೊಂದಿಗೆ ನಿರಂತರ ಮಾತುಕತೆ ನಡೆಸಲಾಗಿದೆ ಎಂದು ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಮೌಲಾನಾ ಎನ್.ಕೆ.ಎಂ. ಶಾಫಿ ಸಅದಿ ತಿಳಿಸಿದ್ದಾರೆ.

ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರು, ಸುಮಾರು ಇನ್ನೂರು ಮನೆಗಳನ್ನು ಬುಲ್ಡೋಝರ್ ಮೂಲಕ ನೆಲಸಮಗೊಳಿಸಿರುವುದು ನೋವುಂಟುಮಾಡಿದೆ. ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಹಾಗೂ ದಲಿತ ಸಮುದಾಯಗಳು ವಾಸಿಸುವ ಪ್ರದೇಶಗಳಿಂದ ಜನರನ್ನು ಕೊರೆಯುವ ಚಳಿಯ ನಡುವೆ ಸ್ಥಳಾಂತರಿಸಿರುವುದು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಹೇಳಿದ್ದಾರೆ.

ಉಸ್ತಾದರ ನೋವು ಹಾಗೂ ಪತ್ರವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದ ಶಾಫಿ ಸಅದಿ ಅವರು, ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಅವರೊಂದಿಗೆ ಕೂಡ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ತಕ್ಷಣವೇ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬಿ.ಬಿ.ಎಂ.ಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಅವರಿಗೆ ಕರೆ ಮಾಡಿ ಖುದ್ದು ಮಾತುಕತೆ ನಡೆಸಿದ್ದಾರೆ. ಮನೆ ಕಳೆದುಕೊಂಡ ನಿರಾಶ್ರಿತರಿಗೆ ಪುನರ್ವಸತಿ, ತುರ್ತು ಆಹಾರ, ಹಾಗೂ ಅತ್ಯಾವಶ್ಯಕ ಸೌಲಭ್ಯಗಳ ಪೂರೈಕೆಗಾಗಿ
ಮುಖ್ಯಮಂತ್ರಿಗಳು ಸ್ಪಷ್ಟ ಆದೇಶ ನೀಡಿದ್ದಾರೆ.

ಎಸ್.ವೈ.ಎಸ್. ಸಾಂತ್ವನ ವಿಭಾಗ ಸೇರಿದಂತೆ ವಿವಿಧ ಸಾಂತ್ವನ ವಿಭಾಗಗಳು
ನಿರಾಶ್ರಿತರ ನೋವಿನಲ್ಲಿ ಭಾಗಿಯಾಗಿ ಸಹಾಯ–ಸಹಕಾರ ನೀಡುತ್ತಿವೆ.

ಸಚಿವರಾದ ಬಿ. ಝಡ್. ಝಮೀರ್ ಅಹ್ಮದ್ ಮತ್ತು ನಝೀರ್ ಅಹ್ಮದ್ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ,
ಸೂಕ್ತ ಪರಿಹಾರ ಹಾಗೂ ಮುಂದಿನ ಹೆಜ್ಜೆಗಳ ಕುರಿತು ಮುಖ್ಯಮಂತ್ರಿಗಳು ಮತ್ತು ಕಂದಾಯ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಮೌಲಾನಾ ಶಾಫಿ ಸಅದಿ ಮಾಹಿತಿ ನೀಡಿದ್ದಾರೆ.