✍️ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ
ಮುಸ್ಲಿಂ ಜಗತ್ತು ರಬೀವುಲ್ ಅವ್ವಲ್ ತಿಂಗಳ ಆಗಮನದ ನಿರೀಕ್ಷೆಯಲ್ಲಿದೆ. ಪೈಗಂಬರ್ ﷺ ರನ್ನು ಅದಮ್ಯವಾಗಿ ಪ್ರೀತಿಸುವ ಮನಸ್ಸುಗಳಿಗೆ ಅದೇನೋ ಸಂಭ್ರಮ. ಈ ಸಂಭ್ರಮವನ್ನು ಮಕ್ಕಳ ಕಾರ್ಯಕ್ರಮ ಆಯೋಜಿಸಿ, ರ‌್ಯಾಲಿಗಳನ್ನು ನಡೆಸಿ, ಮತ ಪ್ರಭಾಷಣ ಗಳನ್ನು ಸಂಘಟಿಸಿ, ಮೌಲಿದ್ ಮಜ್ಲಿಸ್ ಗಳನ್ನು ಏರ್ಪಡಿಸಿ, ಅನ್ನದಾನ ಮಾಡಿ ಕೊಂಡಾಡಲಾಗುತ್ತವೆ. ಈ ಎಲ್ಲಾ ಕಾರ್ಯಕ್ರಮಗಳು ಯಶಸ್ಸಿಯಾಗುವುದು ಯುವಕರಿಂದ. ರಾತ್ರಿ, ಹಗಲೆನ್ನದೆ ಕಾರ್ಯಕ್ರಮದ ಯಶಸ್ಸಿಗಾಗಿ ದುಡಿಯುತ್ತಾರೆ.
ಯುವಕರು ಈ ಸಮುದಾಯದ ನಿಧಿಗಳು.ಅವರ ತ್ಯಾಗ, ದುಡಿಮೆಗಳು ಕಾರ್ಯಕ್ರಮಗಳನ್ನು ಸಕ್ಸಸ್ ಮಾಡುತ್ತವೆ. ಊರಿನ ಬದಲಾವಣೆ ಗಳಲ್ಲಿ, ಅಭಿವೃದ್ಧಿ ಗಳಲ್ಲಿ ಯುವಕರೇ ಮುಖ್ಯ ಪಾತ್ರಧಾರಿಗಳು. ಕೆಲವೊಮ್ಮೆ ಬೆರಳೆಣಿಕೆಯಷ್ಟು ಯುವಕರು ಯುವತ್ವದ ಆವೇಶವನ್ನು ಅತಿರೇಕವಾಗಿ ಈದ್ ಮಿಲಾದ್ ರ‌್ಯಾಲಿಯಲ್ಲಿಯೂ ತೋರಿಸುತ್ತಾರೆ. ಅದು ಬೇಸರವನ್ನೂ ಹುಟ್ಟಿಸುತ್ತದೆ. ರ‌್ಯಾಲಿ ಹೋಗುವಾಗ ಒಂದೆರಡು ಮಂದಿ ಯುವಕರು ಹೆಚ್ಚು ಆವೇಶಕ್ಕೊಳಗಾದಂತೆ ಕಾಣುತ್ತಾರೆ. ಅವರ ಯುವತ್ವದ ಆವೇಶಕ್ಕೆ ಯಾರ ಉಪದೇಶವೂ ನಾಟುತ್ತಿಲ್ಲ ಅಥವಾ ಅವರು ಸ್ವೀಕರಿಸುತ್ತಿಲ್ಲ.
ಮೀಲಾದ್ ರ‌್ಯಾಲಿಯಲ್ಲಿ ಹಸಿರನ್ನು ತಲೆಗೆ ಕಟ್ಟಿ, ವಾಹನ ಗಳ ಮೇಲೆ ಉದ್ದದ ಹಸಿರು ಬಟ್ಟೆಗಳನ್ನು ಹಾಸಿ, ಕಿಲೋಮೀಟರ್ ಉದ್ದದ ಹಸಿರು ಬಾವುಟ ಗಳನ್ನು ಹಿಡಿದು ಭಾಗವಹಿಸುತ್ತಾರೆ. ಇದು ಇಸ್ಲಾಂ ಒಪ್ಪುವುದಿಲ್ಲ, ಪೈಗಂಬರ್ ﷺ ರು ಕೂಡ ತೃಪ್ತಿ ಪಡುವುದಿಲ್ಲ ಎಂದರೂ ಅವರು ಕಿವಿಗಾಕಿಕೊಳ್ಳುವುದಿಲ್ಲ. ಇಂತಹ ಕೃತ್ಯಗಳಿಂದ ಯುವಕರು ದೂರ ನಿಲ್ಲಬೇಕು. ನಮಗೆ ಇಸ್ಲಾಮ್ ಮುಖ್ಯವಾಗಬೇಕು. ಇಸ್ಲಾಂ ವಿರೋಧಿಸಿದ ಕಾರ್ಯಗಳಲ್ಲಿ ನಮಗೆ ಆವೇಶ ಇರಬಾರದು. ಅದರ ಜೊತೆಗೆ ರ‌್ಯಾಲಿಗಳ ಕಾರಣ ವಾಹನ ಸವಾರರಿಗೆ, ದಾರಿ ಹೋಕರಿಗೆ ಯಾವುದೇ ಕಿರಿಕಿರಿ ಉಂಟಾಗದಂತೆ ನೋಡಿಕೊಳ್ಳಬೇಕು. ಏಕೆಂದರೆ, ದಾರಿಯನ್ನು ಸುಗಮ ಗೊಳಿಸಿಕೊಡುವುದು ಈಮಾನಿನ ಭಾಗವೆಂದು ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ವಚನವಿದೆ. ಇಂತಹ ಸುಂದರವಾದ ಬೋಧನೆ ಮಾಡಿದ ಮಹಾನ್ ಮಾನವತಾವಾದಿಯ ಜನ್ಮ ದಿನ ಆಚರಿಸುವ ಕಾರಣ ರಸ್ತೆ ತಡೆಯಾದರೆ ಅದನ್ನು ಆ ನಾಯಕ ಮೆಚ್ಚುವರೇ…? ಇಂತಹ ವರ್ತನೆಗಳಿಂದ ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಪ್ರೀತಿಯನ್ನು ಸಂಪಾದಿಸಲು ಸಾಧ್ಯವಿಲ್ಲ.
ಸ್ವಲಾತ್ ಪಠಿಸಿ, ಮದ್‌ಹ್ ಗಳನ್ನು ಹೇಳಿ ಪೈಗಂಬರ್ ﷺ ತಂಙಳ್ ರವರ ಉದಾತ್ತವಾದ ಸಂದೇಶವನ್ನು ಸಾರುವ ಮೂಲಕ ರ‌್ಯಾಲಿಗಳು ಹಾದು ಹೋಗಬೇಕು. ಜಾಥಗಳಲ್ಲಿ ಕೆಲವು ಯುವಕರು ಅರಿವಿಲ್ಲದೆ ಮಾಡುವ ಕಾರ್ಯಗಳಿಂದ ರ‌್ಯಾಲಿಯ ಉದ್ದೇಶವೇ ಅಪಾರ್ಥಕ್ಕೊಳಗಾಗುತ್ತಿದೆ. ಯೌವ್ವನದಲ್ಲಿ ನಾವು ಮಾಡುವುದು ಸರಿಯೋ, ತಪ್ಪೋ ಎಂದು ಅರಿತು ಕೊಳ್ಳುವುದಕ್ಕಿಂತ ಆವೇಶದ ಭರಾಟೆಯಲ್ಲಿ ಏನೆಲ್ಲಾ ಮಾಡುತ್ತಾರೆ. ಇದು ಸಲ್ಲದು ಎಂದೇಳಿದರೆ ಅನ್ಯಧರ್ಮೀಯರು ಮಾಡುವುದಿಲ್ಲವೇ ? ನಾವೇಕೆ ಮಾಡಬಾರದು ? ಎಂದು ಪ್ರಶ್ನಿಸುವವರೂ ಇದ್ದಾರೆ. ನಮಗೆ ಮಾದರಿ ಪೈಗಂಬರ್ ﷺ ರೇ ಹೊರತು ಅನ್ಯ ಧರ್ಮೀಯರಲ್ಲ. ನಮಗೆ ಬೇಕಾದದ್ದು ಪೈಗಂಬರ್ ﷺ ರ ಪ್ರೀತಿಯೇ ಪರಂತು ಅನ್ಯಧರ್ಮೀಯರ ಮಾದರಿಯಲ್ಲ. ಇನ್ನು ಇಂತಹ ನಡವಳಿಕೆಗಳಿಂದ ಏನಾದರೂ ಲಾಭ ಇದೆಯೇ ? ಖಂಡಿತಾ ಇಲ್ಲ. ರ‌್ಯಾಲಿಯಲ್ಲಿ ಬರುವ ಹಿರಿಯರು ಹಿಡಿ ಶಾಪ ಬಿಟ್ಟರೆ ಬೇರೇನು ಸಂಪಾದಿಸಲು ಸಾಧ್ಯವಿಲ್ಲ.
ನಮ್ಮ ಯುವಕರು ಬದಲಾಗಬೇಕು. ಇಂತಹ ಅನಿಸ್ಲಾಮಿಕ ವರ್ತನೆಗಳಿಂದ ದೂರ ನಿಲ್ಲಬೇಕು. ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಪ್ರೀತಿಯಿಂದ ಆಯೋಜನೆ ಮಾಡುವ ರ‌್ಯಾಲಿಗಳಲ್ಲಿ ಅವರಿಗೆ ತೃಪ್ತಿ ಇಲ್ಲದ ಇಂತಹ ವರ್ತನೆಗಳ ಮಾಡಿದರೆ ಅವರ ಅವಕೃಪೆಗೆ ತುತ್ತಾಗುತ್ತೇವೆ. ಅದರ ಜೊತೆಗೆ ಅಲ್ಲಾಹನ ಕೋಪಕ್ಕೆ ಗುರಿಯಾಗುತ್ತೇವೆ. ಆವೇಶಗಳು ಅತಿರೇಕ ವಾಗಬಾರದು. ರ‌್ಯಾಲಿಗಳಿಂದ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ತೃಪ್ತಿ ಯನ್ನು ಗಳಿಸುವಂತಾಗಬೇಕು. ಮಾದರಿಯೋಗ್ಯ ಜನ ಸಮೂಹ ವಾಗಿ ನಾವು ಮಾರ್ಪಾಡಾಗಬೇಕು.
ರ‌್ಯಾಲಿಗಳನ್ನು ಆದಷ್ಟು ಬೇಗ ಮುಗಿಸುವಂತೆ ಮಾಡಬೇಕು. ಪೈಗಂಬರ್ﷺ ರ ಮೇಲಿನ ಪ್ರೀತಿಯಿಂದ ರ‌್ಯಾಲಿಯಲ್ಲಿ ಭಾಗವಹಿಸಿದ ವೃದ್ಧರು, ರೋಗಿಗಳು, ಅಸಹಾಯಕರು, ಮಕ್ಕಳು ಇದ್ದಾರೆ ಎಂಬುದು ನಾವು ಮರೆಯಬಾರದು. ನಮ್ಮ ಆವೇಶಗಳು ಅವರಿಗೆ ಅಡಚಣೆಯಾಗಬಾರದು. ಒಂದು ಗಂಟೆಯಲ್ಲಿ ಮುಗಿಯಬೇಕಾದ ರ‌್ಯಾಲಿಯನ್ನು ವಿಳಂಬ ಗೊಳಿಸಿ ಎಲ್ಲರಿಗೂ ಅಸಹನೆ ಮೂಡುವಂತೆ ಮಾಡುವುದು ಸರಿಯಲ್ಲ.
ಕೆಲವೊಮ್ಮೆ ಮಸೀದಿಯಲ್ಲಿ ನಡೆಯುವ ಮೌಲಿದ್‌ಗೆ ಕೂಡ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಮೀಲಾದ್‌ನ ಮುಖ್ಯ ಉದ್ದೇಶವೇ ಮೌಲಿದ್ ಆಗಿದೆ. ರ‌್ಯಾಲಿ ಕಾರಣ ಮೌಲಿದ್ ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದರೆ ಆ ರ‌್ಯಾಲಿಗೆ ಏನಾದರೂ ಅರ್ಥವಿದೆಯೇ ? ರ‌್ಯಾಲಿಗಾಗಿ ತೋರುವ ಉತ್ಸಾಹಗಳು ಮೌಲಿದ್ ಮಜ್ಲಿಸ್ ನಲ್ಲಿ ಭಾಗವಹಿಸುವಾಗಲೂ ಇರಬೇಕು. ಮೌಲಿದ್‌ಗೆ ನಿಗಧಿ ಪಡಿಸಿದ ಸಮಯಕ್ಕಿಂತ ಮೊದಲೇ ರ‌್ಯಾಲಿ ಮುಗಿಸಿ ಎಲ್ಲರೂ ಮೌಲಿದ್ ಮಜ್ಲಿಸ್ ನಲ್ಲಿ ಭಾಗವಹಿಸಬೇಕು. ಮೌಲಿದ್ ಗಳು ನಮ್ಮ ಉದ್ದೇಶ ವಾಗಬೇಕು. ಹಸಿರು ಕಟ್ಟಿರಿ, ಹಸಿರು ಬಾವುಟವನ್ನೂ ಹಿಡಿಯಿರಿ ಅದು ಚಂದ ಕಾಣುವಂತಿರಲಿ. ನೋಡುಗರಿಗೆ ಅಸಹ್ಯ ವಾಗುವ ರೀತಿಯಲ್ಲಿ ಕಿಲೊಮೀಟರ್ ಉದ್ದದ ಬಾವುಟ ಹಿಡಿಯುವುದು, ತಲೆಗೆ, ವಾಹನಕ್ಕೆ ಕಟ್ಟುವುದನ್ನು ಉಪೇಕ್ಷಿಸಿರಿ. ಇದಕ್ಕೆ ಯಾವ ಪುಣ್ಯವೂ ಇಲ್ಲ. ಅದು ರ‌್ಯಾಲಿಯ ಸೌಂದರ್ಯ ವನ್ನು ಅಂದಗೆಡಿಸುತ್ತದೆ. ಹಸಿರುಗಳು ನೋಡುಗರನ್ನು ಆಕರ್ಷಿಸುವಂತಿರಲಿ. ಅದರ ಉದ್ದಗಲಗಳು ಮಿತಿ ಮೀರದಿರಲಿ. ಯುವಕರೇ, ನೀವು ಮನಸ್ಸು ಮಾಡಿದರೆ ಮೀಲಾದ್ ರ‌್ಯಾಲಿಗಳನ್ನು ಮಾದರಿಯೋಗ್ಯವಾಗಿ ಮಾಡಲು ಸಾಧ್ಯವಿದೆ. ಈ ವರ್ಷ ನಾವು ಆಚರಿಸುವುದು ಪೈಗಂಬರ್ ﷺ ರ 1500 ನೇ ಜನ್ಮದಿನವಾಗಿದೆ. ಈ ಸಂಭ್ರಮವನ್ನು ಅಚ್ಚುಕಟ್ಟಾದ ರೀತಿಯಲ್ಲಿ ಮಾಡಲು ಪ್ರತಿಜ್ಞೆ ಮಾಡೋಣ. ಯಾರಾದರೂ ಅದಕ್ಕೆ ವಿರುದ್ಧ ವರ್ತಿಸಿದರೆ ಅವರನ್ನು ಪ್ರೀತಿ ಯಿಂದಲೇ ಬದಿಗೆ ಸರಿಸೋಣ. ಯುವತ್ವವು ದೀನಿನ ಆದೇಶ ಪಾಲನೆ ಮಾಡಲು ಮುಡಿಪಾಗಿಡೋಣ. “ಒಳಿತನ್ನು ಆದೇಶ ಮಾಡಿ, ಕೆಡುಕನ್ನು ವಿರೋಧಿಸಿ” ಎಂಬ ಖುರ್‌ಆನ್ ಬೋಧನೆ ನಮ್ಮ ಜೀವನದ ಭಾಗವಾಗಲಿ.


