ದಮಾಮ್: ಸೌದಿ ಅರೇಬಿಯಾದಲ್ಲಿ ಮಳೆ ತೀವ್ರಗೊಳ್ಳಲಿದೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ. ಬಹುತೇಕ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಗುಡುಗು ಮಿಂಚು ಸಹಿತ ಮಳೆಯು ಪ್ರವಾಹಕ್ಕೂ ಕಾರಣವಾಗಬಹುದು. ರಾತ್ರಿ ಮತ್ತು ಮುಂಜಾನೆ ಮಂಜಿನ ಸಾಧ್ಯತೆ. ಜಿಝಾನ್ , ಅಸಿರ್, ಅಲ್-ಬಹಾ, ಮಕ್ಕಾ, ಮದೀನಾ, ಅಲ್-ಖಸಿಮ್, ಹೈಲ್, ಉತ್ತರ ಗಡಿ ಪ್ರದೇಶಗಳು ಮತ್ತು ಅಲ್-ಜವ್ಫ್‌ನಲ್ಲಿಯೂ ಮಳೆ ಬೀಳಲಿದೆ. ರಿಯಾದ್ ಮತ್ತು ಪೂರ್ವ ಪ್ರಾಂತ್ಯದ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ.
ಹೊಳೆಗಳು, ಜವುಗು ಪ್ರದೇಶಗಳು ಮತ್ತು ಕಣಿವೆಗಳ ದಡದಲ್ಲಿ ವಾಸಿಸುವವರಿಗೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ನಾಗರಿಕ ರಕ್ಷಣಾ ಇಲಾಖೆ ಸೂಚಿಸಿದೆ. ಮಂಜು ಮುಸುಕಿದ ಕಾರಣ ರಸ್ತೆಗಳಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುವುದರಿಂದ ದೂರದ ಪ್ರಯಾಣಿಕರು ಎಚ್ಚರಿಕೆ ವಹಿಸುವಂತೆ ಸಂಚಾರ ಇಲಾಖೆ ಎಚ್ಚರಿಕೆ ನೀಡಿದೆ. ಚಳಿಗಾಲದ ಆಗಮನಕ್ಕೆ ನಾಂದಿ ಹಾಡಿರುವ ಮಳೆ ಸೌದಿ ಅರೇಬಿಯಾದ ವಿವಿಧ ಭಾಗಗಳಲ್ಲಿ ಎರಡು ವಾರಗಳಿಗೂ ಹೆಚ್ಚು ಕಾಲ ಮುಂದುವರಿದಿದೆ.