janadhvani

Kannada Online News Paper

ಯುಎಇ: ಸಾಮೂಹಿಕ ಕ್ಷಮಾದಾನ ಮತ್ತೆ ಎರಡು ತಿಂಗಳಿಗೆ ವಿಸ್ತರಣೆ

ತಮ್ಮ ವೀಸಾ ಅವಧಿ ಮುಗಿದ ನಂತರ ಯುಎಇಯಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರಿಗೆ ದಂಡವಿಲ್ಲದೆ ಸ್ವದೇಶಕ್ಕೆ ಮರಳಲು ಇನ್ನೂ ಎರಡು ತಿಂಗಳ ಕಾಲಾವಕಾಶ ಲಭಿಸಲಿದೆ.

ದುಬೈ: ಯುಎಇಯಲ್ಲಿ ಕ್ಷಮಾದಾನ ಮತ್ತೆ ವಿಸ್ತರಣೆಯಾಗಿದೆ. ಕ್ಷಮಾದಾನದ ಪ್ರಯೋಜನವನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದೆ. ಕ್ಷಮಾದಾನ ಅವಧಿಯು ಅಕ್ಟೋಬರ್ 31ಕ್ಕೆ ಮುಕ್ತಾಯವಾಗುತ್ತಿದ್ದಂತೆ ಈ ನಿರ್ಧಾರಕ್ಕೆ ಬರಲಾಗಿದೆ. ವೀಸಾ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡವಿಲ್ಲದೆ ಮನೆಗೆ ಮರಳಲು ಯುಎಇ ಕ್ಷಮಾದಾನವನ್ನು ಘೋಷಿಸಿದೆ.

ಯುಎಇ, ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 31 ರವರೆಗೆ ಕ್ಷಮಾದಾನವನ್ನು ಘೋಷಿಸಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಕ್ಷಮಾದಾನ ಕೇಂದ್ರಗಳಲ್ಲಿ ಉಂಟಾಗಿರುವ ನೂಕುನುಗ್ಗಲು ಪರಿಗಣಿಸಿ ಸರ್ಕಾರವು ಕ್ಷಮಾದಾನದ ಪ್ರಯೋಜನವನ್ನು ಇನ್ನೂ ಎರಡು ತಿಂಗಳವರೆಗೆ ವಿಸ್ತರಿಸಲು ನಿರ್ಧರಿಸಿದೆ. ಇದರೊಂದಿಗೆ, ತಮ್ಮ ವೀಸಾ ಅವಧಿ ಮುಗಿದ ನಂತರ ಯುಎಇಯಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರಿಗೆ ದಂಡವಿಲ್ಲದೆ ಸ್ವದೇಶಕ್ಕೆ ಮರಳಲು ಇನ್ನೂ ಎರಡು ತಿಂಗಳ ಕಾಲಾವಕಾಶ ಲಭಿಸಲಿದೆ. ದಾಖಲೆಗಳನ್ನು ಸರಿಪಡಿಸಲು ಮತ್ತು ಯುಎಇಯಲ್ಲಿ ಕಾನೂನುಬದ್ಧವಾಗಲು ಈ ಅವಧಿಯನ್ನು ಬಳಸಬಹುದು.

“ಯುಎಇಯ 53 ನೇ ಯೂನಿಯನ್ ಡೇ ಆಚರಣೆಯೊಂದಿಗೆ ಮತ್ತು ದೇಶದ ಮಾನವೀಯ ಮತ್ತು ನಾಗರಿಕ ಮೌಲ್ಯಗಳ ಸಾಕಾರವಾಗಿ (ಕ್ಷಮಾದಾನ) ಗಡುವನ್ನು ವಿಸ್ತರಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ” ಎಂದು ICP ಡೈರೆಕ್ಟರ್ ಜನರಲ್ ಮೇಜರ್-ಜನರಲ್ ಸುಹೈಲ್ ಸಯೀದ್ ಅಲ್ ಖೈಲಿ ಹೇಳಿದರು.

ಪ್ರಸ್ತುತ, ನಿರ್ಗಮನ ಪರವಾನಗಿ ಪಡೆದವರು 14 ದಿನಗಳಲ್ಲಿ ದೇಶವನ್ನು ತೊರೆಯಬೇಕೆಂದು ಐ.ಸಿ.ಪಿ ಸೂಚನೆ ನೀಡಿದೆ. ವಿವಿಧ ರಾಷ್ಟ್ರಗಳ ಸಾವಿರಾರು ವಲಸಿಗರು ಈಗಾಗಲೇ ಕ್ಷಮಾದಾನದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ದುಬೈ ಇಂಡಿಯನ್ ಕಾನ್ಸುಲೇಟ್ ಅಂಕಿಅಂಶಗಳ ಪ್ರಕಾರ, ಹತ್ತು ಸಾವಿರ ಭಾರತೀಯ ನಾಗರಿಕರು ಕ್ಷಮಾದಾನವನ್ನು ಕೋರಿದ್ದಾರೆ. ಈ ಪೈಕಿ 1300 ಮಂದಿಗೆ ಪಾಸ್ ಪೋರ್ಟ್ ಹಾಗೂ 1700 ಮಂದಿಗೆ ತುರ್ತು ಪ್ರಮಾಣಪತ್ರ ನೀಡಲಾಗಿದೆ. ಕಾನ್ಸುಲೇಟ್ ಮೂಲಕ 1,500 ಕ್ಕೂ ಹೆಚ್ಚು ಜನರಿಗೆ ನಿರ್ಗಮನ ಪರವಾನಗಿಯನ್ನು ಒದಗಿಸಲಾಗಿದೆ.

error: Content is protected !! Not allowed copy content from janadhvani.com