ಗುಜರಾತ್: ಅಝಾನ್‌ಗೆ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸುವಂತೆ ಕೋರಿ ಬಜರಂಗದಳದ ನಾಯಕ ಶಕ್ತಿಸಿಂಹ ಝಾಲಾ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದ್ದು, ಮನವಿಯನ್ನು ಸಂಪೂರ್ಣವಾಗಿ ತಪ್ಪು ಕಲ್ಪನೆ ಎಂದು ಹೇಳಿದೆ.
ಧ್ವನಿವರ್ಧಕಗಳ ಮೂಲಕ ಅಝಾನ್ ಕೊಡುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಇದು ಜನರ ವಿಶೇಷವಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿದಾರ ಬಜರಂಗದಳದ ನಾಯಕ ಕೋರ್ಟ್‌ನಲ್ಲಿ ವಾದಿಸಿದ್ದರು.
ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಅನಿರುದ್ಧ ಪಿ ಮಾಯೆ ಅವರ ವಿಭಾಗೀಯ ಪೀಠವು, ಅರ್ಜಿ ವಿಚಾರಣೆಯ ವೇಳೆ ದೇವಾಲಯದಲ್ಲಿ ಆರತಿ ಸಮಯದಲ್ಲಿ ಗಂಟೆ ಶಬ್ಧವು ಹೊರಗೆ ಕೇಳಿಸುವುದಿಲ್ಲವೇ ಎಂದು ಕೇಳಿದೆ. ಯಾವ ಆಧಾರದ ಮೇಲೆ ಶಬ್ದ ಮಾಲಿನ್ಯ ಉಂಟಾಗುತ್ತದೆ ಎಂದು ಅರ್ಜಿದಾರರು ಹೇಳುತ್ತಿದ್ದಾರೆ ಎಂದು ಪೀಠವು ಪ್ರಶ್ನಿಸಿದೆ.
ಅಝಾನ್‌ನ್ನು ದಿನದಲ್ಲಿ ಹೆಚ್ಚೆಂದರೆ 10ನಿಮಿಷಗಳಂತೆ 5 ಬಾರಿ ಕೂಗಲಾಗುತ್ತದೆ. ಬೆಳಿಗ್ಗೆ ಧ್ವನಿವರ್ಧಕದ ಮೂಲಕ ಅಝಾನ್ ನೀಡುವ ಮಾನವ ಧ್ವನಿಯು ಶಬ್ದ ಮಾಲಿನ್ಯವನ್ನು ಹೇಗೆ ಉಂಟು ಮಾಡುತ್ತದೆ ಎಂದು ನಾವು ತಿಳಿಯಲು ವಿಫಲರಾಗಿದ್ದೇವೆ ಎಂದು ಕೋರ್ಟ್ ಹೇಳಿದೆ.
ನಾವು ಈ ರೀತಿಯ ಪಿಐಎಲ್‌ನ್ನು ಪರಿಗಣಿಸುತ್ತಿಲ್ಲ. ಇದು ವರ್ಷಗಳಿಂದ ನಡೆದುಕೊಂಡು ಬಂದಿರುವ ನಂಬಿಕೆ ಮತ್ತು ಆಚರಣೆಯಾಗಿದೆ. ಇದು 5-10 ನಿಮಿಷಗಳ ಕಾಲ ಇರುತ್ತದೆ. ಮುಂಜಾನೆ 3 ಗಂಟೆಗೆ ದೇವಸ್ಥಾನದಲ್ಲಿ, ಡ್ರಮ್ಸ್ ಮತ್ತು ಸಂಗೀತದೊಂದಿಗೆ ಬೆಳಿಗ್ಗೆ ಆರತಿ ಕೂಡ ಪ್ರಾರಂಭವಾಗುತ್ತದೆ. ಹಾಗಾದರೆ ಇದು ಯಾರಿಗೂ ಯಾವುದೇ ರೀತಿಯ ಶಬ್ದವನ್ನು ಉಂಟುಮಾಡುವುದಿಲ್ಲವೇ? ಗಂಟೆಯ ಶಬ್ಧ ದೇವಾಲಯದ ಹೊರಗೆ ಕೇಳಿಸುವುದಿಲ್ಲವೇ ಎಂದು ಕೋರ್ಟ್ ಪ್ರಶ್ನಿಸಿದೆ. ಅರ್ಜಿದಾರರ ವಾದವು ಯಾವುದೇ ವೈಜ್ಞಾನಿಕ ಅಂಶವನ್ನು ಒಳಗೊಂಡಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಶಬ್ದ ಮಾಲಿನ್ಯವನ್ನು ಅಳೆಯಲು ವೈಜ್ಞಾನಿಕ ವಿಧಾನವಿದೆ. ಆದರೆ ಅರ್ಜಿದಾರರು 10 ನಿಮಿಷಗಳ ಅಝಾನ್ ಶಬ್ದ ಮಾಲಿನ್ಯವನ್ನು ಹೇಗೆ ಉಂಟುಮಾಡುತ್ತದೆ ಎಂಬುದನ್ನು ತೋರಿಸಲು ಯಾವುದೇ ದಾಖಲೆಯನ್ನು ಒದಗಿಸಿಲ್ಲ ಎಂದು ನ್ಯಾಯಾಲಯವು ಹೇಳಿದೆ.