ಬೆಂಗಳೂರು, ಮೇ 22-ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮುಸ್ಲಿಂ ಸಮುದಾಯದ ಶಾಸಕರೊಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಮುಸ್ಲಿಂ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ರಾಜ್ಯದಲ್ಲಿ ದಲಿತರ ನಂತರ ಜನಸಂಖ್ಯೆಯ ದೃಷ್ಟಿಯಿಂದ ಎರೆಡನೇ ಅತಿದೊಡ್ಡ ಸಮುದಾಯವಾಗಿರುವ ಮುಸ್ಲಿಮರಿಗೆ ಇದುವರಿಗೆ ರಾಜಕೀಯವಾಗಿ ಅನ್ಯಾಯವಾಗುತ್ತಲೇ ಇದೆ.
ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಯತ್ನಿಸಿದ ಭಾರತೀಯ ಜನತಾ ಪಕ್ಷ ಈ ಬಾರಿಯೂ ಮುಸ್ಲಿಂ ಸಮುದಾಯದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಒಬ್ಬರಿಗೂ ಟಿಕೆಟ್ ನೀಡಲಿಲ್ಲ ಜಾತ್ಯತೀತ ಪಕ್ಷಗಳೆಂದು ಹೇಳಿಕೊಳ್ಳುವ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಕಡಿಮೆ ಸಂಖ್ಯೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಿದ ಪರಿಣಾಮ ಕಾಂಗ್ರೆಸ್ ನಿಂದ ಏಳು ಮಂದಿ ಮುಸ್ಲಿಮರು ಗೆದ್ದಿದ್ದರೆ ಜೆಡಿಎಸ್ ಒಬ್ಬ ಮುಸ್ಲಿಮನೂ ಗೆಲ್ಲಲು ಸಾಧ್ಯವಾಗಿಲ್ಲ. ಮುಸ್ಲಿಂ ಸಮುದಾಯ ಎಷ್ಟೇ ಹಿಂದುಳಿದಿದ್ದರೂ ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆಯ ಮೇಲೆ ಅತ್ಯಂತ ವಿಶ್ವಾಸ ಇಟ್ಟು ಪ್ರತಿ ಚುನಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುತ್ತ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತ ಬಂದಿದೆ ಆದರೆ ಮುಸ್ಲಿಮರ ಮತಗಳಿಗೆ ದುಂಬಾಲು ಬೀಳುವ ಜಾತ್ಯತೀತ ಪಕ್ಷಗಳು ಮುಸ್ಲಿಮರಿಗೆ ಕೊಡಬೇಕಾದ ಪ್ರಾಶಸ್ತ್ಯವನ್ನು ನೀಡದೆ ವಂಚಿಸುತ್ತ ಬಂದಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಸಂಚಾಲಕ ಸಮೀವುಲ್ಲಾ ಖಾನ್ ಆರೋಪಿಸಿದರು.
ಈ ಬಾರಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದು, ಎಚ್.ಡಿ.ಕುಮಾರಸ್ವಾಮಿ ಯವರು ಮುಖ್ಯಮಂತ್ರಿಯಾಗುತ್ತಿದ್ದಾರೆ ಕುಮಾರಸ್ವಾಮಿಯವರನ್ನು ವೇದಿಕೆ ಅಭಿನಂದಿಸುತ್ತದೆ ಎಂದರು. ಸಾಚಾರ್ ಸಮಿತಿಯ ವರದಿ ಹೇಳಿರುವಂತೆ ಮುಸ್ಲಿಂ ಸಮುದಾಯ ತೀರಾ ಹಿಂದುಳಿದಿದ್ದು, ಸಮುದಾಯದ ಸಮಸ್ಯೆ ಸವಾಲುಗಳನ್ನು ತಳಮಟ್ಟದಿಂದ ಗ್ರಹಿಸಿದ ಏಳು ಬಾರಿ ಸಮುದಾಯದವರನ್ನು ಪ್ರತಿನಿಧಿಸಿ ಹಿರಿತನ ಹೊಂದಿರುವ ರೋಷನ್‍ಬೇಗ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕೆಂದು ಅವರು ಆಗ್ರಹಿಸಿದರು. ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕಾಂಗ್ರೆಸ್ ಮುಖಂಡರಾದ ಸಿದ್ಧರಾಮಯ್ಯ, ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆಯವರು ಮುಸ್ಲಿಂ ಸಮುದಾಯದ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮುಸ್ಲಿಂ ಸಂಘಟನೆಗಳ ಒಕ್ಕೂಟದ ಪರವಾಗಿ ಒತ್ತಾಯಿಸುತ್ತೇನೆ ಎಂದರು.