janadhvani

Kannada Online News Paper

ಜಿ-20 ಶೃಂಗಸಭೆಗೆ ಕ್ಷಣಗಣನೆ- ವಿಶ್ವ ನಾಯಕರು ರಾಷ್ಟ್ರ ರಾಜಧಾನಿಯಲ್ಲಿ

ಶೃಂಗಸಭೆ ಅವಧಿಯಲ್ಲಿ ಪ್ರಧಾನಿ ಮೋದಿ ಅವರು ವಿಶ್ವ ನಾಯಕರೊಂದಿಗೆ 15 ಕ್ಕೂ ಹೆಚ್ಚು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.

ನವದೆಹಲಿ: ಜಗತ್ತಿನ 19 ದೇಶಗಳು ಹಾಗೂ ಐರೋಪ್ಯ ಒಕ್ಕೂಟದ ನಾಯಕರು ಪಾಲ್ಗೊಳ್ಳುವ ಅತಿ ದೊಡ್ಡ ವಾರ್ಷಿಕ ಶೃಂಗಸಭೆ ‘ಜಿ–20’ ನವದೆಹಲಿಯಲ್ಲಿ ನಾಳೆಯಿಂದ ಎರಡು ದಿನಗಳ ಕಾಲ (ಸೆ.9 ಹಾಗೂ 10) ನಡೆಯಲಿದೆ.

ಜಿ-20 ಶೃಂಗಸಭೆಗೆ ಕ್ಷಣಗಣನೆ ಆರಂಭವಾಗಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತಿತರ ದೇಶಗಳ ನಾಯಕರು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬಂದಿಳಿದಿದ್ದು, ಕೆಲ ರಾಷ್ಟ್ರಗಳ ನಾಯಕರು ಈಗಾಗಲೇ ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದಾರೆ.

ಶೃಂಗಸಭೆ ಹಿನ್ನೆಲೆಯಲ್ಲಿ ನವದೆಹಲಿ ಭಿತ್ತಿಚಿತ್ರಗಳು, ಬ್ಯಾನರ್ ಗಳು, ಕಾರಂಜಿಗಳು ಮತ್ತು ಬೀದಿಯಲ್ಲಿ ಸಸ್ಯಗಳಿಂದ ಅಲಂಕರಿಸಲ್ಪಟ್ಟಿದೆ ಮತ್ತು ಪ್ರಧಾನ ಕಾರ್ಯಕ್ರಮ ಆಯೋಜಿಸಿರುವ ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪದ ಮುಂದೆ ನಟರಾಜನ ದೈತ್ಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ದೆಹಲಿಯ ವಿವಿಧ ಪ್ರದೇಶಗಳಲ್ಲಿ ಇಂದಿನಿಂದ ಮುಂದಿನ ಮೂರು ದಿನಗಳವರೆಗೆ ತುರ್ತು ಸೇವೆಗಳಿಗೆ ಹೊರತುಪಡಿಸಿ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಶೃಂಗಸಭೆ ಅವಧಿಯಲ್ಲಿ ಪ್ರಧಾನಿ ಮೋದಿ ಅವರು ವಿಶ್ವ ನಾಯಕರೊಂದಿಗೆ 15 ಕ್ಕೂ ಹೆಚ್ಚು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಇಂದು ಅಮೆರಿಕಾ, ಮಾರಿಷಸ್, ಬಾಂಗ್ಲಾದೇಶ ಹಾಗೂ ಯುಎಸ್ ಎ ನಾಯಕರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. ನಾಳೆ ಯುಕೆ, ಜಪಾನ್, ಜರ್ಮನಿ ಮತ್ತು ಇಟಲಿ ಮತ್ತು ನಾಡಿದ್ದು, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಅವರೊಂದಿಗೆ ಭೋಜನಕೂಟದೊಂದಿಗೆ ಸಭೆಯನ್ನು ಪ್ರಧಾನಿ ಮೋದಿ ನಡೆಸಲಿದ್ದಾರೆ.

ಉಳಿದಂತೆ ಕೆನಡಾ, ಕೊಮೊರೊಸ್, ತುರ್ಕಿಯೆ, ಯುಎಇ, ದಕ್ಷಿಣ ಕೊರಿಯಾ, ಇಯು/ಇಸಿ, ಬ್ರೆಜಿಲ್ ಮತ್ತು ನೈಜೀರಿಯಾ ರಾಷ್ಟ್ರಗಳ ನಾಯಕರೊಂದಿಗೂ ಪ್ರಧಾನಿ ಮೋದಿ ದ್ವೀಪಕ್ಷೀಯ ಸಭೆ ನಡೆಸಲಿದ್ದು, ಹಲವು ಜಾಗತಿಕ ವಿಚಾರ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆಗೆ ಎಂಟು ತಿಂಗಳುಗಳು ಉಳಿದಿರುವ ಸಮಯದಲ್ಲಿ ಸಂಘಟಿಸಿರುವ ‘ಶೃಂಗ’ದ ಮಹಾ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹೆಚ್ಚಿನ ಆಸ್ಥೆಯಿಂದ ಕೆಲಸ ಮಾಡುತ್ತಿದೆ. ‘ವಿಶ್ವ ಗುರು’ವಾಗಲು ಹಾಗೂ ಸತತ ಮೂರನೇ ಬಾರಿಗೆ ‘ಭಾರತ’ ಗೆಲ್ಲಲು ಇದೊಂದು ಏಣಿ ಎಂದು ಪರಿಭಾವಿಸಿರುವ ಮೋದಿ ಸರ್ಕಾರವು ಜಾಗತಿಕ ನಾಯಕರ ಸಭೆಯ ಭರ್ಜರಿ ಯಶಸ್ಸಿಗೆ ಆಹೋರಾತ್ರಿ ಶ್ರಮಿಸುತ್ತಿದೆ.

ನಗರ ಮುಖ್ಯ ಭಾಗದ ಹೋಟೆಲ್‌ಗಳು ಹಾಗೂ ಸರ್ಕಾರಿ ಕಟ್ಟಡಗಳು ಮತ್ತು ಹಲವು ಫ್ಲೆಕ್ಸ್‌ಗಳಲ್ಲಿ ಜಿ–20 ಶೃಂಗಸಭೆಯದ್ದೇ ಸುದ್ದಿ. ಈ ಎಲ್ಲ ಜಾಹೀರಾತುಗಳಲ್ಲಿ ‘ಬಿಜೆಪಿಯ ಚಿಹ್ನೆ’ ಹೊಂದಿರುವ ಜಿ–20 ಲೋಗೋ ಮತ್ತು ಪ್ರಧಾನಿ ಅವರ ಭಾವಚಿತ್ರಗಳು ಪ್ರಮುಖವಾಗಿವೆ.

ಭಾರತದ ಜಿ–20 ಅಧ್ಯಕ್ಷತೆಯನ್ನು ಪ್ರಧಾನಿಯವರು ‘ಜನರ ಅಧ್ಯಕ್ಷತೆ’ ಎಂದು ಬಣ್ಣಿಸಿದ್ದಾರೆ. ಈ ಸಮ್ಮೇಳನದ ಲೋಗೊ ಮತ್ತು ಹೋರ್ಡಿಂಗ್‌ಗಳಲ್ಲಿ ಬಳಸಲಾದ ಬಣ್ಣ, ಸಂದೇಶಗಳು ಎಲ್ಲವೂ ರಾಜಕೀಯ ಸಂದೇಶಗಳನ್ನು ಒಳಗೊಂಡಿರುವುದನ್ನು ಕಾಣಬಹುದು.

ಜಿ–20 ಸಮ್ಮೇಳನ್ಕಾಗಿ ಜಗತ್ತಿನ ಮೂಲೆ ಮೂಲೆಯಿಂದ ಬರುವ ನಾಯಕರನ್ನು ಸ್ವಾಗತಿಸಲು ನಗರ ಸಜ್ಜಾಗಿದೆ. ವಿವಿಐಪಿಗಳನ್ನು ಹೊತ್ತ ವಿಮಾನಗಳು ನಗರಕ್ಕೆ ಬಂದಿಳಿಯಲು ಆರಂಭಿಸಿವೆ. ನೈಜೀರಿಯಾದ ಗಣ್ಯರ ತಂಡವು ರಾಜಧಾನಿಗೆ ಈಗಾಗಲೇ ತಲುಪಿದೆ. ಶುಕ್ರವಾರ ಹಾಗೂ ಶನಿವಾರ 55 ವಿವಿಐಪಿ ವಿಮಾನಗಳು ದೆಹಲಿಗೆ ಬರಲಿವೆ. ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಇಲ್ಲಿನ ಪೊಲೀಸರು ಸಕಲ ಕ್ರಮಗಳನ್ನು ಕೈಗೊಂಡಿದ್ದಾರೆ. ಬಹುತೇಕ ಕಡೆ ಹೈ ಅಲರ್ಟ್‌ ಘೋಷಿಸಲಾಗಿದೆ. ಪೊಲೀಸ್‌ ಸಿಬ್ಬಂದಿಯ ಜತೆಗೆ ಅರೆಸೇನಾ ಪಡೆಯ ಸಿಬ್ಬಂದಿಗಳನ್ನೂ ನಿಯೋಜಿಸಲಾಗಿದೆ.

error: Content is protected !! Not allowed copy content from janadhvani.com