janadhvani

Kannada Online News Paper

ಬಶೀರ್ ಕಾವೂರು ಮತ್ತು ಜಲೀಲ್, ನೌಶೀನ್ ಗೋಲಿಬಾರ್ ಸಂತ್ರಸ್ತ ಕುಟುಂಬಸ್ಥರಿಗೆ ಪರಿಹಾರ- ಮುಸ್ಲಿಮ್ ಒಕ್ಕೂಟ ಪ್ರಸ್ತಾಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪ್ರಸ್ತಾವನೆ ಮುಂದಿಟ್ಟ ಕೆ.ಅಶ್ರಫ್ ನೇತೃತ್ವದ ಮುಸ್ಲಿಂ ಒಕ್ಕೂಟ ನಿಯೋಗ

ಬೆಂಗಳೂರು: ಮತೀಯ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಶೀರ್ ಕಾವೂರು ಹಾಗೂ ಗೋಲಿಬಾರ್ ಗೆ ಬಲಿಯಾದ ಜಲೀಲ್ ಮತ್ತು ನೌಶೀನ್ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ರಾಜ್ಯ ಸರ್ಕಾರಕ್ಕೆ ಪ್ರಸ್ತಾಪಿಸಿದೆ.

ಸುರತ್ಕಲ್ ಕೃಷ್ಣಾಪುರದಲ್ಲಿ ನಡೆದ ದೀಪಕ್ ರಾವ್ ಎಂಬ ಯುವಕನ ಹತ್ಯೆಗೆ ಪ್ರತೀಕಾರವಾಗಿ ಅದೇ ದಿನ ರಾತ್ರಿ ಕಾವೂರು ಎಂಬಲ್ಲಿ ರಾತ್ರಿ ಫಾಸ್ಟ್ ಫುಡ್ ರೆಸ್ಟೋರೆಂಟ್ ನಿಂದ ಮನೆಗೆ ಹಿಂತಿರುಗುತ್ತಿದ್ದ ಬಶೀರ್ ಕಾವೂರು ರವರನ್ನು ದುಷ್ಕರ್ಮಿಗಳು ಮಾರಕ ಆಯುಧಗಳಿಂದ ಕೊಚ್ಚಿ ಹತ್ಯೆಗೈದಿದ್ದರು.

ಈ ಹತ್ಯೆ ಮತೀಯ ವಿದ್ವೇಶದಿಂದ ನಡೆಸಿದ ಹತ್ಯೆಯಾಗಿದೆ. ಹತ್ಯಾ ನಂತರ ಸರಕಾರ ಸಂತ್ರಸ್ತ ಕುಟುಂಬಸ್ತರಿಗೆ ಪರಿಹಾರ ವಿತರಣೆ ಮಾಡಿರಲಿಲ್ಲ.

ಇದೀಗ ಸರಕಾರ, ಜಿಲ್ಲೆಯ ವಿವಿಧ ಮತೀಯ ವಿದ್ವೇಶಃ ಪ್ರಕರಣದಲ್ಲಿ ಹತ್ಯೆಯಾದ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ವಿತರಣೆ ಮಾಡಿದೆ. ಮೃತ ಬಶೀರ್ ಕಾವೂರು ರವರ ಕುಟುಂಬವೂ ಪರಿಹಾರ ಪಡೆಯಲು ಅರ್ಹರಾಗಿದ್ದು ಸರಕಾರ ಬಶೀರ್ ಕುಟುಂಬಸ್ಥರಿಗೆ ಕೂಡ ಪರಿಹಾರ ನೀಡಬೇಕೆಂದು ಮುಸ್ಲಿಮ್ ಒಕ್ಕೂಟ ಸರ್ಕಾರಕ್ಕೆ ಮನವಿ ಮಾಡಿದೆ.

2019 ರಲ್ಲಿ ಪೊಲೀಸರು ಗೋಲಿಬಾರ್ ನಡೆಸಿದ ಪರಿಣಾಮವಾಗಿ ಮೃತಪಟ್ಟ ಜಲೀಲ್ ಮತ್ತು ನೌಷೀನ್ ಕುಟುಂಬಸ್ಥರಿಗೂ ಪರಿಹಾರ ನೀಡಬೇಕೆಂದು ಸರಕಾರಕ್ಕೆ ಪ್ರಸ್ತಾಪಿಸಲಾಗಿದೆ.

ಮತೀಯ ದುಷ್ಕರ್ಮಿಗಳಿಂದ ಹತ್ಯೆಗೊಳಗಾದವರ ಕುಟುಂಬಕ್ಕೆ ಬೆಂಗಳೂರಿನಲ್ಲಿ ಪರಿಹಾರ ವಿತರಣೆ ಸಂಧರ್ಬದಲ್ಲಿ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರಲ್ಲಿ ಬಶೀರ್ ಕಾವೂರು ರವರ ಕುಟುಂಬಸ್ಥರಿಗೆ ಮತ್ತು ಗೋಲಿಬಾರ್ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವಿಕೆಯ ವಿಷಯ ಪ್ರಸ್ತಾವನೆ ಮಾಡಿರುವುದಾಗಿ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ತಿಳಿಸಿದ್ದಾರೆ.

ನಿಯೋಗದಲ್ಲಿ ಅಬ್ದುಲ್ ಜಲೀಲ್ ಅದ್ದು ಕೃಷ್ಣಾಪುರ, ಅಶ್ರಫ್ ಬದ್ರಿಯಾ ಮತ್ತು ಷರೀಫ್, ಫಾರೂಕ್ ಮತ್ತಿತರರು ಉಪಸ್ಥಿತರಿದ್ದರು.
.

error: Content is protected !! Not allowed copy content from janadhvani.com