ಮಂಗಳೂರು: ಇತ್ತೀಚೆಗೆ ಕಾಣಿಯೂರು ಎಂಬಲ್ಲಿ ಇಬ್ಬರು ಮುಸ್ಲಿಮ್ ವರ್ತಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಸಂತ್ರಸ್ತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ಕೆಲವು ಮುಸ್ಲಿಮ್ ವರ್ತಕರು ಎಂದು ಹೇಳಿಕೊಳ್ಳುವ ವ್ಯಕ್ತಿಗಳು, ಮಾಧ್ಯಮದ ಮೂಲಕ ಹಲ್ಲೆ ಸಂತ್ರಸ್ತರು ಮುಸಲ್ಮಾನರು ಎಂದು ಅರಿಯದೆ, ಮಾರ್ವಾಡಿಗಳು ಎಂದು ತಪ್ಪು ಗ್ರಹಿಕೆಯಿಂದ ಹಲ್ಲೆ ಮಾಡಲಾಗಿದೆ ಎಂದು ಸಾರ್ವಜನಿಕ ಹೇಳಿಕೆ ನೀಡಿರುವುದರ ವಿರುದ್ಧ ಕೆ.ಅಶ್ರಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲ್ಲೆಗೆ ಒಳಪಡುವ ಸಂತ್ರಸ್ತರು ಮಾರ್ವಾಡಿಗಳು ಆಗಬೇಕಿತ್ತು ಎಂದು ಪರೋಕ್ಷವಾಗಿ ಹೇಳಿದಂತಿದೆ. ಹಲ್ಲೆಗೊಳಗಾದವರು ನಾಗರಿಕ ಸಮಾಜದ ಮನುಷ್ಯರಾಗಿ ಇತರರಂತೆ ಈ ದೇಶದ, ಈ ಊರಿನ, ಈ ನಾಡಿನ ಸಂಸಾರ, ಪತ್ನಿ, ಮಕ್ಕಳು ಹೊಂದಿರುವ ಕುಟುಂಬ ಸದಸ್ಯರು ಎಂಬುದನ್ನು ಮರೆತಂತಿದೆ.
ಹಲ್ಲೆಯ ಪರಿಣಾಮ ತೀವ್ರ ಸ್ವರೂಪ ಪಡೆಯುವ ಈ ಹಂತದಲ್ಲಿ ವ್ಯತ್ಯಸ್ತ ಹೇಳಿಕೆಗಳು ಆರೋಪಿಗಳನ್ನು ರಕ್ಷಿಸುವ ಹುನ್ನಾರದಿಂದಲೇ ಮಾಡಲಾಗಿರುತ್ತದೆ. ಆರೋಪಿಗಳು ಸ್ಪಷ್ಟವಾಗಿ ಕಾನೂನನ್ನು ಕೈಗೆತ್ತಿಕೊಂಡು ಅಮಾನವೀಯವಾಗಿ ಹಲ್ಲೆ ನಡೆಸಿರುವುದು ವ್ಯಾಪಕ ಖಂಡನೆಗೆ ಕಾರಣವಾಗಿರುವುದರಿಂದ ಮುಸ್ಲಿಮ್ ವರ್ತಕರನ್ನು ಮುನ್ನೆಲೆಗೆ ಸಾಗ ಹಾಕಿ ತೇಪೆ ಹಚ್ಚುವ ಪ್ರಯತ್ನ ಮಾಡಲಾಗಿದೆ.
ಈ ಹಲ್ಲೆಯನ್ನು ಮುಸ್ಲಿಮ್ ಎಂಬ ಕಾರಣಕ್ಕಾಗಿ ಮಾಡಲಾಗಿದ್ದು, ಆರೋಪಿಗಳು ಮತೀಯ ದ್ವೇಷದಿಂದ ಹಲ್ಲೆ ನಡೆಸಿ, ವರ್ತಕರ ಕೊಲೆಗೆ ಪ್ರಯತ್ನಿಸಿದ್ದಾರೆ. ಹಲ್ಲೆಯನ್ನು ಪ್ರಜ್ಞಾವಂತ ನಾಗರಿಕರು ಯಾವುದೇ ಭೇದವಿಲ್ಲದೆ ಖಂಡಿಸಿದ್ದಾರೆ.
ಆರಂಭದಲ್ಲಿ ಹಲ್ಲೆಯನ್ನು ಚಿನ್ನಾಭರಣ ಎಗರಿಸಿ ಪರಾರಿಯಾದ ಕಾರಣಕ್ಕೆ ಎಂದೂ, ಆ ನಂತರ ಲೈಂಗಿಕ ದೌರ್ಜನ್ಯಕ್ಕೆ ಎಂದೂ ಕಥೆ ಕಟ್ಟಿ ಪ್ರಚಾರ ನಡೆಸಲಾಗಿತ್ತು. ನಿನ್ನೆ ಕೆಲವು ‘ವರ್ತಕರು’ ಮಾಧ್ಯಮದ ಮೂಲಕ ಹಲ್ಲೆ ಸಂತ್ರಸ್ತರು ಮುಸಲ್ಮಾನರು ಎಂದು ಅರಿಯದೆ, ಮಾರ್ವಾಡಿಗಳು ಎಂದು ತಪ್ಪು ಗ್ರಹಿಕೆಯಿಂದ ಹಲ್ಲೆ ಮಾಡಲಾಗಿದೆ ಎಂದು ಸಾರ್ವಜನಿಕ ಹೇಳಿಕೆ ನೀಡಿರುತ್ತಾರೆ.
ಹಲ್ಲೆಯ ಸಂತ್ರಸ್ತರು ಯಾವುದೇ ಸಮುದಾಯಕ್ಕೆ ಸೇರಿರಲಿ ಅದನ್ನು ಖಂಡಿಸುವುದು ಅನಿವಾರ್ಯ, ಹಲ್ಲೆಯನ್ನು ಸಮರ್ಥಿಸಿ ಸಾರ್ವಜನಿಕ ಹೇಳಿಕೆ ನೀಡುವ ಜನರಿಂದ ಏನನ್ನು ನಿರೀಕ್ಷಿಸಬಹುದು?. ಸರ್ವ ಸಮುದಾಯದವರು ಸೇರಿಕೊಂಡು ಆ್ಯಂಬುಲೆನ್ಸ್ ಎಂಬ ಕಾರುಣ್ಯ ಸೇವೆಯನ್ನು ಮಾಡುತ್ತಾ ಮಾನವ ಸೇವೆಗೈಯುವ ಊರಿನಲ್ಲಿ ಅದ್ಹೇಗೆ ಸಾಧ್ಯವಾಯಿತು, ಅಮಾಯಕರಿಗೆ ವಿವೇಚನೆ ರಹಿತವಾಗಿ ಹಲ್ಲೆ ನಡೆಸಿ, ಸಂತ್ರಸ್ತರನ್ನು ಮಾರಣಾಂತಿಕ ಸ್ಥಿತಿಗೆ ತರುವ ಮನಸ್ಥಿತಿ?. ಅಂತಹ ಸೇವೆ ಇದ್ದರೇನು, ಬಿಟ್ಟರೇನು, ಸರ್ವವೂ ಮಸಿ ನುಂಗಿತು.
‘ ವರ್ತಕರ ತಂಡ’ ಪತ್ರಿಕಾ ಹೇಳಿಕೆ ನೀಡಿ ಊರಿನ ಸೌಹಾರ್ದತೆಯನ್ನು ಪರಿಪಾಲಿಸುವ ಪ್ರಬುದ್ಧತೆ ಇರುವ ಜನರು ಅಸ್ತಿತ್ವದಲ್ಲಿ ಇರುವ ಪರಿಸರದಲ್ಲಿ, ಹೊಟ್ಟೆಪಾಡಿಗಾಗಿ ದುಡಿದು ಬದುಕುವ ಜನರು ವ್ಯಾಪಾರಕ್ಕೆ. ಬಂದಾಗ ಪ್ರಾಣಿಗಿಂತ ಕಡೆಯಾಗಿ ಹಲ್ಲೆ ನಡೆಸುವ ಮತ್ತು ಸತ್ತು ಹೋಗಿದ್ದಾರೆ ಎಂದು ನಿರ್ಲಕ್ಷಿಸಿ ಜಾಗ ಖಾಲಿ ಮಾಡುವ ಅನೇಕ ದುಷ್ಕರ್ಮಿಗಳು ಸ್ವೇಚಂದವಾಗಿ ವಿಹರಿಸುವುದಾದರೆ, ವರ್ತಕರಾದ ನಿಮ್ಮ ಪ್ರಬುದ್ಧತೆಯನ್ನು ಯಾರ ಬಳಿಯಾದರೂ ಅಡವಿಗೆ ಇಡುವುದು ಸೂಕ್ತ ಎಂದು ಕೆ.ಅಶ್ರಫ್.
(ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ) ಆಕ್ರೋಶ ವ್ಯಕ್ತಪಡಿಸಿದ್ದಾರೆ.