ನವದೆಹಲಿ : ಉಕ್ರೇನ್ ನಲ್ಲಿ ಹತನಾಗಿರುವ ಭಾರತೀಯ ವಿದ್ಯಾರ್ಥಿ ನವೀನ್ ಅವರ ತಂದೆಗೆ ಖುದ್ದು ಪ್ರಧಾನಿ ಮೋದಿ ಕರೆ ಮಾಡಿ ಸಂತಾಪಗಳನ್ನು ತಿಳಿಸಿದ್ದಾರೆ. ನೋವು ಭರಿಸುವ ಶಕ್ತಿ ದೇವರು ನೀಡಲಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಮೋದಿ ನವೀನ್ ತಂದೆ ಶೇಖರಗೌಡಗೆ ಧೈರ್ಯ ತುಂಬಿದ್ದಾರೆ.
ನವೀನ್ ಸಾವು ಬಹಳ ದುಃಖ ತರಿಸಿದೆ. 2-3 ದಿನಗಳಲ್ಲಿ ಮೃತದೇಹವನ್ನು ತರಿಸುವ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಉಕ್ರೇನ್ನಲ್ಲಿ ನವೀನ್ ಮೃತರಾಗಿದ್ದಾರೆ. ಅವರು 4ನೇ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದರು. ಒಂದು ವಾರದಿಂದ ಬಂಕರ್ನಲ್ಲಿದ್ದರು. ಇವತ್ತು ರೈಲ್ವೆ ನಿಲ್ದಾಣದ ಮೂಲಕ ಹೊರಬಂದಿದ್ದಾರೆ. ಏರ್ ಸ್ಟೈಕ್ ವೇಳೆ ಶೆಲ್ ಬಡಿದು ಅವರು ಸಾವನ್ನಪ್ಪಿದ್ದಾರೆ. ನವೀನ್ ಜೊತೆಗೆ ಅವರ ಊರಿನವರೇ ಇನ್ನಿಬ್ಬರು ಸ್ನೇಹಿತರಿದ್ದರು. ಅದರಲ್ಲಿ ಚಳ್ಳಗೆರೆಯ ಓರ್ವನಿಗೆ ಗಾಯವಾಗಿದೆ. ಇನ್ನೊಬ್ಬರಿಗೆ ಅದೃಷ್ಟವಶಾತ್ ಏನು ಆಗಿಲ್ಲ. ವಿದೇಶಾಂಗ ಇಲಾಖೆ ನವೀನ್ ಸಾವನ್ನು ದೃಢಪಡಿಸಿದೆ. ನವೀನ್ ತಂದೆ ಜೊತೆ ಮಾತಾಡಿದ್ದೇನೆ. ನನಗೆ ಬಹಳ ಬೇಕಾದ ಕುಟುಂಬ. ಅವರ ಸೋದರ ಸಂಬಂಧಿ ನನ್ನ ಸ್ನೇಹಿತರಾಗಿದ್ದು, ದುಬೈನಲ್ಲಿದ್ದಾರೆ ಎಂದು ಭಾವುಕರಾದರು.
ರಷ್ಯಾ ದಾಳಿಗೆ ಭಾರತೀಯ ವಿದ್ಯಾರ್ಥಿ ಹಸುನೀಗಿರುವ ಸುದ್ದಿ ನಿಜಕ್ಕೂ ದುಃಖಕರವಾಗಿದೆ. ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ನನ್ನ ಸಂತಾಪಗಳು. ಉಳಿದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರತರಬೇಕಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ನವೀನ್ ಸಾವಿಗೆ ಮರುಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಂತಾಪ ಸೂಚಿಸಿ, ಆದಷ್ಟು ಬೇಗ ಇದೆಲ್ಲಾ ಕೊನೆಯಾಗಲಿ ಎಂದು ಆಶಿಸಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ನವೀನ್ ಸಾವಿಗೆ ಬಿಜೆಪಿಯ ನಡೆಯೇ ಕಾರಣ ಎಂದು ಟೀಕಿಸಿದ್ದಾರೆ. ಆದಷ್ಟು ಬೇಗ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇದಕ್ಕೆ ನವೀನ್ ಪ್ರಾಣವನ್ನು ತೆತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಹಬ್ಬದ ದಿನ ಕರಾಳ ಸುದ್ದಿ ನಮಗೆ ಒದಗಿ ಬಂದಿದೆ ಎಂದು ನವೀನ್ ಸಾವಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೋವನ್ನು ವ್ಯಕ್ತಪಡಿಸಿದ್ದಾರೆ. ಉಳಿದ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಹಾವೇರಿ ಜಿಲ್ಲೆಯ 21 ವರ್ಷದ ನವೀನ್ ಮೆಡಿಕಲ್ ಓದಿಗಾಗಿ ಉಕ್ರೇನ್ ಗೆ ತೆರಳಿದ್ದರು. ಇಂದು ಬೆಳಗ್ಗೆ ಊಟ ತರಲು ಹೊರಗಡೆ ತೆರಳಿದಾಗ ಘಟನೆ ನಡೆದಿದೆ ಎನ್ನಲಾಗಿದೆ.