ಕೋಝಿಕ್ಕೋಡ್, ಜ.4| ಸಮಸ್ತವನ್ನು ಹೈಜಾಕ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಇಕೆ ವಿಭಾಗದ ಸಮಸ್ತ ಅಧ್ಯಕ್ಷ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದ್ದಾರೆ.
ಕೋಝಿಕ್ಕೋಡ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಚಳವಳಿಗೆ ಜನರನ್ನು ಸೃಷ್ಟಿಸುವುದು ಸಮಸ್ತದ ಕೆಲಸವಲ್ಲ, ಸಮಸ್ತ ಒಂದು ಆಧ್ಯಾತ್ಮಿಕ ಸಂಘನೆಯಾಗಿದೆ ಎಂದರು. ಸಮಸ್ತದ ಅಧೀನ ಸಂಸ್ಥೆಗಳಲ್ಲೂ ರಾಜಕೀಯ ಪ್ರೇರಣೆಯನ್ನು ಕಲಿಸಲಾಗುತ್ತಿಲ್ಲ.
ರಾಜಕೀಯವನ್ನು ಯಾರಿಗೂ ಕಲಿಸಬೇಕಾಗಿಲ್ಲ, ಅದು ಸ್ವಯಂ ಪ್ರೇರಿತವಾದ ಆಯ್ಕೆಯಾಗಿದೆ. ನಾವು ಮಾರ್ಕ್ಸ್ವಾದಿ ಪಕ್ಷ ಅಥವಾ ಲೀಗ್ ವಿರೋಧಿಯಲ್ಲ. ಸಮಸ್ತದ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ನೀಡುವ ಹೇಳಿಕೆ ಮಾತ್ರವೇ ಸಮಸ್ತದ ಅಧಿಕೃತ ಅಭಿಪ್ರಾಯವಾಗಿರುತ್ತದೆ ಎಂದು ಜಿಫ್ರಿ ತಂಙಳ್ ಹೇಳಿದರು.
ಇತ್ತೀಚೆಗೆ ನಡೆದ ಸಮಸ್ತ ಮಲಪ್ಪುರಂ ಜಿಲ್ಲಾ ಸಮ್ಮೇಳನದಲ್ಲಿ ಕೆಲವು ಸಮಸ್ತದ ನಾಯಕರ ಭಾಷಣವು ರಾಜಕೀಯ ಪ್ರೇರಿತವಾಗಿತ್ತು. ಸಮಸ್ತ ಮಲಪ್ಪುರಂ ಜಿಲ್ಲಾ ಅಧ್ಯಕ್ಷರಾದ MT ಅಬ್ದುಲ್ಲಾಹ್ ಮುಸ್ಲಿಯಾರ್ ಮಾತನಾಡಿ, ಸಮಸ್ತ ಮುಸ್ಲಿಂ ಲೀಗ್ ಪಕ್ಷದ್ದು ಮತ್ತು ಮುಸ್ಲಿಂ ಲೀಗ್ ಸಮಸ್ತದ್ದು ಎಂದು ರಾಜೋರೋಷವಾಗಿ ಘೋಷಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ತಂಙಳ್, ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದರು.
ಅದೇ ಸಮ್ಮೇಳನದಲ್ಲಿ, ಕಮ್ಯುನಿಸಂ ವಿರುದ್ಧ ನಿರ್ಣಯವನ್ನೂ ಹೊರಡಿಸಲಾಗಿತ್ತು. ಆ ಬಗ್ಗೆ ನಿನ್ನೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ತಂಙಳ್, “ಮಲಪ್ಪುರಂನಲ್ಲಿ ನಡೆದ ಸಮಾವೇಶದಲ್ಲಿ ಕಮ್ಯುನಿಸಂ ವಿರುದ್ಧ ನಿರ್ಣಯ ಮಂಡಿಸಿರುವುದು ತಮಗೆ ತಿಳಿದಿಲ್ಲ ಎಂದು ಹೇಳಿದ್ದರು. ಮುಸ್ಲಿಂ ಸಮುದಾಯವು ಕಮ್ಯುನಿಸಂಗೆ ಸಹಕಾರ ನೀಡುವಲ್ಲಿ ಜಾಗರೂಕರಾಗಿರಬೇಕು ಎಂಬ ನಿರ್ಣಯದೊಂದಿಗೆ ಕೆಲವು ಚಾನೆಲ್ಗಳು ಮತ್ತು ಆನ್ಲೈನ್ಗಳಲ್ಲಿ ತನ್ನ ಫೋಟೋವನ್ನು ಸೇರಿಸಿ ತಪ್ಪುದಾರಿಗೆಳೆಯುತ್ತಿದೆ, ಈ ನಿರ್ಣಯವು ನನ್ನ ಅರಿವಿಗೆ ಬಂದಿಲ್ಲ ಅದನ್ನು ನನ್ನ ಒಪ್ಪಿಗೆಯೊಂದಿಗೆ ಪರಿಚಯಿಸಲಾಗಿಲ್ಲ. ಇಂತಹ ಸುದ್ದಿಗಳಿಗೆ ನನ್ನ ಫೋಟೋ ಸೇರಿಸಿ ದುರುದ್ದೇಶಪೂರ್ವಕವಾಗಿ ಹಬ್ಬಿಸುವುದನ್ನು ಸಂಬಂಧಪಟ್ಟವರು ತಡೆಯಬೇಕು” ಎಂದು ಜಿಫ್ರಿ ತಂಙಳ್ ನಿನ್ನೆ ಹೇಳಿದ್ದರು.
ಮಲಪ್ಪುರಂನಲ್ಲಿ ನಡೆದ ಗೋಲ್ಡನ್ ಜುಬಿಲಿ ಸಮ್ಮೇಳನವು ಒಂದು ರಾಜಕೀಯ ಪಕ್ಷದ ಪ್ರಚಾರ ಸಮ್ಮೇಳನದಂತೆ ಗೋಚರಿಸುತ್ತಿತ್ತು. ಮುಸ್ಲಿಂ ಲೀಗ್ ಸಮಸ್ತವನ್ನು ಹೈಜಾಕ್ ಮಾಡುತ್ತಿದೆ ಎಂದು ಕೇರಳದ ಕ್ರೀಡೆ, ವಖ್ಫ್ ಮತ್ತು ಹಜ್ ಸಚಿವರಾದ ವಿ. ಅಬ್ದುರ್ರಹ್ಮಾನ್ ಹೇಳಿದ್ದರು.







