ಮಥುರ: ಇಲ್ಲಿನ ಅತಿ ಪುರಾತನ ಮಸೀದಿಯಲ್ಲಿ ಬಲವಂತವಾಗಿ ಕೃಷ್ಣನ ವಿಗ್ರಹ ಪ್ರತಿಷ್ಠಾಪನೆ ಮಾಡುವುದಾಗಿ ಅಖಿಲ ಭಾರತ ಹಿಂದೂ ಮಹಾಸಭಾ ಹೇಳಿಕೆಯ ಬೆನ್ನಲ್ಲೇ ಮಥುರಾದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಹಿಂದೂ ಮಹಾಸಭಾ ಈ ಹೇಳಿಕೆಯ ಮುಖಾಂತರ ಮತ್ತೆ ಅಶಾಂತಿಯ ವಾತಾವರಣ ಸೃಷ್ಟಿಸಲು ಮುಂದಾಗಿದೆ.
ದೇವಾಲಯದ ಹತ್ತಿರವೇ ಮಸೀದಿ ಇದ್ದು, ಹಿಂದೂ ಮಹಾಸಭಾದೊಂದಿಗೆ ಮತ್ತೊಂದು ಸಂಘಟನೆಯಾದ ನರಾಯಣಿ ಸೇನಾ, ಮಸೀದಿಯ ತೆರವಿಗೆ ಆಗ್ರಹಿಸಿ ವಿಶ್ರಮ್ ಘಾಟ್ ನಿಂದ ಕೃಷ್ಣ ಜನ್ಮಸ್ಥಾನದವರೆಗೆ ಜಾಥ ಕೈಗೊಳ್ಳುವುದಾಗಿ ಹೇಳಿಕೆ ನೀಡಿದ್ದು, ಯಾರಿಗೂ ಶಾಂತಿ ಕದಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ನವನೀತ್ ಸಿಂಗ್ ಚಹಾಲ್ ತಿಳಿಸಿದ್ದಾರೆ.
ಸೆಕ್ಷನ್ 144 ಸಿಆರ್ ಪಿಸಿ ಜಾರಿಯಾದಲ್ಲಿ ಆ ಪ್ರದೇಶದ ಸುತ್ತ ಮುತ್ತ ನಾಲ್ಕು ಮಂದಿಗಿಂತಲೂ ಹೆಚ್ಚಿನ ಜನರು ಸೇರುವುದನ್ನು ನಿರ್ಬಂಧಿಸಲಾಗುತ್ತದೆ. ನಾರಾಯಣಿ ಸೇನಾ ಕಾರ್ಯದರ್ಶಿ ಅಮಿತ್ ಮಿಶ್ರಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎರಡೂ ಧಾರ್ಮಿಕ ಪ್ರದೇಶಗಳಲ್ಲಿ ಎಸ್ ಪಿ ಭದ್ರತೆಯನ್ನು ಪರಿಶೀಲನೆ ನಡೆಸಿದ್ದಾರೆ. ಮಹಾಸಭಾದವರು ವಿಗ್ರಹ ಸ್ಥಾಪನೆ ಮಾಡುವುದಕ್ಕಾಗಿ ಮನವಿ ಸಲ್ಲಿಸಿತ್ತು. ಆದರೆ ಅನುಮತಿ ನಿರಾಕರಿಸಲಾಗಿದೆ ಎಂದು ಚಹಾಲ್ ಹೇಳಿದ್ದಾರೆ.
ಸ್ಥಳೀಯ ನ್ಯಾಯಾಲಯ ಅರ್ಜಿ ವಿಚಾರಣೆ!
17ನೇ ಶತಮಾನದ ಮಸೀದಿಯನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸ್ಥಳೀಯ ನ್ಯಾಯಾಲಯವು ವಿಚಾರಣೆ ನಡೆಸುತ್ತಿರುವ ಸಮಯದಲ್ಲಿ ಈದ್ಗಾದಲ್ಲಿ ವಿಗ್ರಹ ಸ್ಥಾಪಿಸುವ ಬೆದರಿಕೆ ಬಂದಿದೆ. ಆದರೆ, ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ ಮತ್ತು ನೀಡುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಮಥುರಾದಲ್ಲಿರುವ ಕ್ವಾಮಿ ಏಕತಾ ಮಂಚ್‌ನ ಸದಸ್ಯರು ಡಿಸೆಂಬರ್ 6 ರಂದು ಹೆಚ್ಚುವರಿ ಭದ್ರತೆ ಒದಗಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಒತ್ತಾಯಿಸಿದ್ದಾರೆ.