ಸುಳ್ಳಿನ ಸಾಮ್ರಾಜ್ಯದಲ್ಲಿ ಅರಾಜಕತೆಯೇ ಖಳನಾಯಕ!
ಮಂಗಳೂರು: ವಾಮ ಮಾರ್ಗದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸಿ ಅದಕ್ಕಾಗಿಯೇ ಒಂದು ಪ್ರತ್ಯೇಕ ಧಾರ್ಮಿಕ ವಿಭಾಗದ ವಿರುದ್ದ ನಿರಂತರ ಸುಳ್ಳು ಮತ್ತು ದ್ವೇಷವನ್ನು ಹರಡಿ ವ್ಯಾಪಕ ಪಡಿಸಿದರ ದುಷ್ಪರಿಣಾಮವೇ ಅಸ್ಸಾಮಿನಲ್ಲಿ ನಡೆದ ಅತ್ಯಂತ ಬೀಭತ್ಸವೂ ರಾಕ್ಷಸೀಯವೂ ಆದ ಕುಕೃತ್ಯ ಎಂದು ಮುಲ್ಕಿ ಜುಮಾ ಮಸೀದಿಯ ಖತೀಬರಾದ ಎಸ್ ಬಿ ದಾರಿಮಿ ಜುಮಾ ಭಾಷಣದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಇಡೀ ಜಗತ್ತಿನಲ್ಲೇ ನಮ್ಮ ದೇಶದ ಮಾನವನ್ನು ಹರಾಜಿಗಿಡುವಂತಹ ಮತ್ತು ಮೃಗಗಳೂ ಕೂಡಾ ನಾಚಿ ತಲೆ ತಗ್ಗಿಸುವಂತಹ ಘಟನೆ ಅಸ್ಸಾಮಿನಿಂದ ವರದಿಯಾಗಿದೆ. ತುಂಡು ಭೂಮಿಯಲ್ಲಿ ಹಲವು ವರ್ಷಗಳಿಂದೀಚೆಗೆ ವಾಸಿಸುತ್ತಿದ್ದ ಬಡ ಬುಡಕಟ್ಟು ಜನರನ್ನು ನಿಷ್ಕಾರುಣ್ಯವಾಗಿ ಸರಕಾರವು ಕ್ಷುಲ್ಲಕ ನೆಪವೊಡ್ಡಿ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಒಕ್ಕಲೆಬ್ಬಿಸಲು ಹೊರಟಾಗ ಮನೆ ಮಠ ಗಳನ್ನು ಕಳೆದು ಕೊಳ್ಳುವ ಭೀತಿಯಿಂದ ಜನರು ಪ್ರತಿಭಟಿಸಿದ್ದಾರೆ. ಆಗ ಪೋಲೀಸರು ನಿರಾಯುಧರ ಮೇಲೆ ಗುಂಡು ಹಾರಿಸಿ ಹೆಣಗಳನ್ನು ಹುರುಳಿಸಿದ್ದೇ ಅಲ್ಲದೇ ಪಾರ್ಥಿವ ಶರೀರದ ಮೇಲೆ ವಿಕೃತಿಯನ್ನೂ ಕೂಡಾ ಮೆರೆದಿದ್ದಾರೆ. ಮತ್ತು ಅದನ್ನು ವರದಿ ಮಾಡಲು ಹೋದ ಅತ್ಯಂತ ನೀಚ ಪತ್ರಕರ್ತನೊಬ್ಬ ತನ್ನ ರಾಕ್ಷಸೀ ವರ್ತನೆ ಮೂಲಕ ಇಡೀ ನಾಗರಿಕ ಸಮಾಜವೇ ನಾಚಿ ತಲೆ ತಗ್ಗಿಸುವಂತೆ ಮಾಡಿದ್ದಾನೆ. ಇದು ನಿಜಕ್ಕೂ ದೇಶ ಅರಾಜಕತೆಯತ್ತ ದಾಪುಗಾಲು ಹಾಕುತ್ತಿದೆಯಾ ಎಂಬ ಸಂಶಯ ಜನರಲ್ಲಿ ಹುಟ್ಟು ಹಾಕಿದೆ.
ಇಂದು ಅಸ್ಸಾಮಿನಲ್ಲಿ ನಡೆದ ಘಟನೆ ನಾಳೆ ನಮ್ಮ ಕಾಲ ಬುಡದಲ್ಲಿ ಯಾಕೆ ನಡೆಯಬಾರದು?
ಆದ್ದರಿಂದ ಇಂತಹ ಅಮಾನವೀಯ ಕೃತ್ಯಗಳ ವಿರುದ್ದ ಪಕ್ಷ ಬೇದವಿಲ್ಲದೇ ಜಾತಿ ಧರ್ಮದ ಹಂಗಿಲ್ಲದೇ ದೇಶಕ್ಕೇ ದೇಶವೇ ಪ್ರತಿಭಟಿಸಿ ಕೀಚಕರಿಗೆ ಬಿಸಿ ಮುಟ್ಟಿಸುವ ಕೆಲಸ ಆಗ ಬೇಕಾಗಿದೆ ಎಂದು ಕರೆ ನೀಡಿದ ಖತೀಬರು ಗೊತ್ತು ಗುರಿ ಇಲ್ಲದ ಆಡಳಿತದಿಂದಾಗಿ ಜನ ಬೇಸತ್ತಿದ್ದಾರೆ. ದೇಶದ ನಿಜವಾದ ಸಮಸ್ಯೆ ಯಿಂದ ಜನರ ಗಮನವನ್ನು ಬೇರೆಡೆ ತಿರುಗಿಸಲು ಏನೇನೋ ಕುಂತಂತ್ರಗಳನ್ನು ಹಣೆಯುತ್ತಿದ್ದಾರೆ.
ದೇವಸ್ಥಾನ ಹುರುಳಿಸಿದ್ದೂ ಇದರ ಭಾಗವೇ ಆಗಿರಲೂ ಬಹುದು. ಸುಳ್ಳಿನ ಸಾಮ್ರಾಜ್ಯದಲ್ಲಿ ಅರಾಜಕತೆಯೇ ವಿಲನ್ ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.ಅಪರಾಧ ಕೃತ್ಯದಲ್ಲಿ ತೊಡಗಿಸಿ ಕೊಂಡವರ ಧರ್ಮ ಮತ್ತು ಹೆಸರಿನ ಆಧಾರದಲ್ಲಿ ಅಪರಾಧಗಳ ಗಂಭೀರತೆಯನ್ನು ನಿರ್ಣಯಿಸಲಾಗುತ್ತದೆ. ಪಕ್ಷಪಾತೀ ಮೀಡಿಯಾಗಳ ನೀತಿಗೆಟ್ಟ ಧೋರಣೆಯಿಂದಾಗಿ ನಿನ್ನೆ ಭಯೋತ್ಪಾಕನೆಂದು ಪ್ರಚಾರ ನೀಡಲ್ಪಟ್ಟವ ಇಂದು ಅದರಿಂದ ಮುಕ್ತಿ ಪಡೆಯುತ್ತಾನೆ. ಜನರು ಯಾವುದೇ ಸುದ್ದಿಗಳನ್ನು ನಂಬದಂತಹ ಪರಿಸ್ಥಿತಿ ಉಂಟಾಗಿದೆ. ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದರೂ ಧರ್ಮದ ನಶೆಯನ್ನು ತಲೆಗೆ ತುಂಬಿಸಿ ಯಾವುದಕ್ಕೂ ಮಾತಾಡದಂತೆ ಜನರ ಬಾಯಿಯನ್ನು ಮುಚ್ಚಿಸಲಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸುಳ್ಳಿನಿಂದ ಕಟ್ಟಲಾದ ಯಾವುದೂ ಶಾಸ್ವತವಲ್ಲ.
ಸತ್ಯಕ್ಕೆ ಸಾವಿಲ್ಲ ಎಂದು ಹಿರಿಯರು ಹೇಳಿದ್ದು ಸುಳ್ಳಾಗಲು ಸಾಧ್ಯವಿಲ್ಲ. ಸುಳ್ಳು ಒಂದಲ್ಲ ಒಂದು ದಿನ ಸಾಯಲೇ ಬೇಕಾಗುತ್ತದೆ ಎಂದ ಖತೀಬರು ಮನೆಮಂದಿಗಳು, ಕುಟುಂಬ ವರ್ಗದವರು ತಮ್ಮಲ್ಲಿ ಸುಳ್ಳು ಹೇಳುವುದನ್ನು ರೂಡಿಸಿದರೆ ಅಲ್ಲಿ ಹೇಗೆ ಶಾಂತಿ ಮರೀಚಿಕೆಯಾಗುತ್ತದೆಯೋ ಅದೇ ರೀತಿ ದೇಶವೊಂದರಲ್ಲಿ ಸುಳ್ಳೇ ವಿಜ್ರಂಭಿಸಿದರೆ ಅಲ್ಲಿ ನೆಮ್ಮದಿ ಹಾಳಾಗುತ್ತದೆ ಎಂದು ವ್ಯಾಖ್ಯಾನಿಸಿದರು. ಮುಂದುವರೆದು ಮಾತನಾಡಿದ ಅವರು ಧರ್ಮ ಪ್ರಚಾರದ ವೇಳೆಯಲ್ಲಿ ಕೂಡ ಸುಳ್ಳು ಹೇಳುವುದರಿಂದ ಆ ಧರ್ಮಕ್ಕೆ ಕಲಂಕ ಉಂಟಾಗುತ್ತದೆ.
ಇತ್ತೀಚೆಗೆ ಕೇರಳದಲ್ಲಿ ಉಂಟಾದ ನಾರ್ಕೋಟಿಕ್ ಜಿಹಾದ್ ಎಂಬ ಹೊಸ ವಿವಾದವನ್ನು ಇದಕ್ಕೆ ಉದಾಹರಿಸಿದ ಅವರು ತಮ್ಮ ದೈನಂದಿನ ವ್ಯವಹಾರಗಳಲ್ಲಿ ಸತ್ಯವನ್ನೇ ಅಳವಡಿಸಿ ಕೊಂಡರೆ ಅವರ ಮೌಲ್ಯ ಹೆಚ್ಚುವುದಲ್ಲದೇ ಅದರಿಂದಾಗಿ ಆತ್ಮೀಯ ಸಂತೃಪ್ತಿ ದೊರಕಿ ಸ್ವರ್ಗದ ಬಾಗಿಲು ತೆರೆಯಲ್ಪಡುತ್ತದೆ ಎಂದು ಕುರ್ಆನ್ ಮತ್ತು ಪ್ರವಾದಿ ನುಡಿಗಳನ್ನು ಉಲ್ಲೇಖಿಸಿ ಪ್ರವಚನ ನೀಡಿದರು.