janadhvani

Kannada Online News Paper

1 ರಿಂದ 8 ಶಾಲೆ ಪುನರಾರಂಭ – ಇಂದು ನಿರ್ಧಾರ

ಬೆಂಗಳೂರು: 1 ರಿಂದ 8ರವರೆಗಿನ ಮಕ್ಕಳಿಗೂ ಭೌತಿಕ ತರಗತಿ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯುವ ಕೋವಿಡ್ ತಾಂತ್ರಿಕ ತಜ್ಞರ ಸಲಹಾ ಸಮಿತಿಯ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು.

ಕೇರಳದಲ್ಲಿ ಕೋವಿಡ್‌ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆ ಆಗುತ್ತಿರುವುದರಿಂದ ರಾಜ್ಯದಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕು ಎಂದು ಸಾರ್ವಜನಿಕರಿಂದ ಒತ್ತಾಯ ಕೇಳಿ ಬರುತ್ತಿದ್ದರೂ, ಕೋವಿಡ್‌ ಸಂಭಾವ್ಯ ಮೂರನೇ ಅಲೆಯ ಭೀತಿ ಇರುವುದರಿಂದ ಸಲಹಾ ಸಮಿತಿಯ ನಿರ್ಧಾರವೇ ಅಂತಿಮವಾಗಲಿದೆ.

ಶಾಲೆ ಆರಂಭಕ್ಕೆ ಸಿದ್ಧತೆ: ‘ರಾಜ್ಯದಲ್ಲಿ 1ರಿಂದ 8ರವರೆಗಿನ ಮಕ್ಕಳಿಗೂ ಭೌತಿಕ ತರಗತಿ ಆರಂಭಿಸಲು ಶಿಕ್ಷಣ ಇಲಾಖೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದ ಮರುದಿನದಿಂದಲೇ ಶಾಲೆಗಳನ್ನು ಆರಂಭಿಸುವ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

‘ಶಿಕ್ಷಣ ಇಲಾಖೆಯ ಮುಂದೆ ಎರಡು ಆಯ್ಕೆಗಳಿವೆ. ಮೊದಲು 6ರಿಂದ 8ನೇ ತರಗತಿ ಆರಂಭಿಸಿ, ಮಕ್ಕಳು ಹಾಗೂ ಪೋಷಕರ ಪ್ರತಿಕ್ರಿಯೆ ಆಧರಿಸಿ 15 ದಿನಗಳ ಬಳಿಕ 1ರಿಂದ 5ನೇ ತರಗತಿ ಆರಂಭಿಸುವ ಯೋಚನೆಯಿದೆ. ಒಮ್ಮೆಗೆ 1ರಿಂದ 8ನೇ ತರಗತಿ ಆರಂಭಿಸುವ ಬಗ್ಗೆಯೂ ಯೋಚಿಸಲಾಗುತ್ತಿದೆ’ ಎಂದಿದ್ದಾರೆ.

‘ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳಲ್ಲಿ ನಿರ್ವಹಣೆ ಸಮಸ್ಯೆ ಇಲ್ಲ. ಸುಮಾರು 10 ಸಾವಿರ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚು ಇದೆ. ಅಂಥ ಶಾಲೆಯಲ್ಲಿ ನಿರ್ವಹಣೆ ಸ್ವಲ್ಪ ಕಷ್ಟವಿದೆ. ಅಂಥವುಗಳಲ್ಲಿ ಪಾಳಿ ಪದ್ಧತಿ ಅಥವಾ ಬೇರೆ ಯಾವುದಾದರೂ ವಿಧಾನದ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಒಟ್ಟಿನಲ್ಲಿ ತಾಂತ್ರಿಕ ಸಲಹಾ ಸಮಿತಿ ನೀಡುವ ಅಭಿಪ್ರಾಯ ಹಾಗೂ ಮಾರ್ಗಸೂಚಿಯಂತೆ ಶಾಲೆಗಳು ಆರಂಭವಾಗಲಿದೆ’ ಎಂದು ಅವರು ತಿಳಿಸಿದ್ದಾರೆ.

ಖಾಸಗಿ ಶಾಲೆಗಳ ಶುಲ್ಕದ ವಿಚಾರವಾಗಿ ಮುಖ್ಯಮಂತ್ರಿ ಜೊತೆ ಪ್ರತ್ಯೇಕವಾಗಿ ಚರ್ಚಿಸಿ, ಆದಷ್ಟು ಬೇಗ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ.

error: Content is protected !! Not allowed copy content from janadhvani.com