ಆಗಸ್ಟ್ 15… ಭಾರತದ ಪಾಲಿಗೆ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ದಿನ. ಕಲೆ, ಸಾಹಿತ್ಯ, ಸಂಸ್ಕೃತಿಯಿಂದ ಶ್ರೀಮಂತವಾಗಿದ್ದ ನಮ್ಮ ದೇಶ ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಮುಕ್ತವಾಗಿ ಹೊಸ ರೂಪ ಪಡೆದ ಸುದಿನ ಇದು. ಇಂದು ನಾವೆಲ್ಲರೂ ಈ ಸ್ವಾತಂತ್ರ್ಯದ ಸವಿಯುಣ್ಣುತ್ತಿದ್ದೇವೆ ನಿಜ. ಆದರೆ, ಇದು ಅತ್ಯಂತ ಸುಲಭವಾಗಿ ಸಿಕ್ಕಿರುವ ಸ್ವಾತಂತ್ರ್ಯ ಖಂಡಿತಾ ಅಲ್ಲ. ಅದೆಷ್ಟೋ ದೇಶಭಕ್ತರು ತಮ್ಮ ರಕ್ತವನ್ನೇ ಬೆವರಂತೆ ಬಸಿದು ತಂದುಕೊಟ್ಟ ಸ್ವಾತಂತ್ರ್ಯ ಇದು. ತಮ್ಮ ಈ ಹೋರಾಟದ ಹಾದಿಯಲ್ಲಿ ಅದೆಷ್ಟೋ ಕೆಚ್ಚೆದೆಯ ವೀರರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದರು. ಅನುದಿನವೂ ಅನುಕ್ಷಣವೂ ದೇಶದ ಬಗ್ಗೆಯೇ ಚಿಂತಿಸುತ್ತಿದ್ದ ಈ ಸಮರ ಸೇನಾನಿಗಳ ತ್ಯಾಗದ ಫಲವೇ ಇಂದಿನ ಸ್ವಾತಂತ್ರ್ಯ.
ಯಾವ ಭಾರತೀಯನೂ ಮರೆಯಲು ಸಾಧ್ಯವೇ ಇಲ್ಲದ ದಿನ ಇದು. ಸ್ವಾತಂತ್ರ್ಯ ಸಂಗ್ರಾಮದ ಒಂದೊಂದು ಕತೆಗಳನ್ನು ಕೇಳಿದಾಗಲೂ, ಒಂದೊಂದು ಕ್ಷಣವನ್ನು ನೆನಪಿಸಿಕೊಳ್ಳುವಾಗಲೂ ದೇಶ ಪ್ರೇಮದ ಕಿಚ್ಚು ನಮ್ಮಲ್ಲಿ ಅಧಿಕವಾಗುತ್ತಲೇ ಸಾಗುತ್ತದೆ. ಇದೇ ಕಾರಣಕ್ಕೆ ಆಗಸ್ಟ್ 15 ಎಂದರೆ ಎಲ್ಲರ ಬದುಕಿನಲ್ಲೂ ತನ್ನದೇ ಆದ ಮಹತ್ವದ ಸ್ಥಾನ ಪಡೆದಿದೆ.
ನಮ್ಮ ದೇಶಕ್ಕಾಗಿ ಜೀವ ತೆತ್ತ ಅದೆಷ್ಟೋ ಕೆಚ್ಚೆದೆಯ ವೀರರ ತ್ಯಾಗ ಬಲಿದಾನವನ್ನು ವ್ಯರ್ಥವಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ನಮ್ಮ ದೇಶವನ್ನು ಕಟ್ಟಲು ಶ್ರಮಿಸಿದ ಪ್ರತಿಯೊಬ್ಬರು ಹಾಕಿಕೊಟ್ಟ ದೇಶಪ್ರೇಮ, ಪ್ರಾಮಾಣಿಕತೆಯ ಹಾದಿಯಲ್ಲಿ ಮುನ್ನಡೆಯುವುದು ಕೂಡಾ ಬಲು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ಹೆಜ್ಜೆ ಇಡೋಣ.
ಸರ್ವರಿಗೂ 75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.