ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪದತ್ಯಾಗ ಮಾಡಿದ್ದು, ಇದೀಗ ಮುಂದಿನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿದೆ.ಇಂದು ಸಂಜೆ ಖಾಸಗಿ ಹೊಟೇಲ್ನಲ್ಲಿ ನಡೆದ ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಆಯ್ಕೆ ನಡೆದಿದೆ.
ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಸಂಸದೀಯ ಮಂಡಳಿಯಿಂದ ವೀಕ್ಷಕರ ನೇಮಕ ಮಾಡಲಾಗಿತ್ತು. ರಾಜ್ಯದಲ್ಲಿ ನೂತನ ಸಿಎಂ ಆಯ್ಕೆಗೆ ವೀಕ್ಷಕರಾಗಿ ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ ಆಗಮಿಸಿದ್ದರು. ಬಿಎಸ್ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಸಿಟಿ ರವಿ ಸೇರಿದಂತೆ ರಾಜ್ಯದ ಬಿಜೆಪಿ ಶಾಸಕರು ಸಭೆಯಲ್ಲಿ ಭಾಗವಹಿಸಿದ್ದಾರೆ.
ನಾಳೆ ಮಧ್ಯಾಹ್ನ 3.30 ಕ್ಕೆ ರಾಜ್ಯದ 31ನೇ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಆ ಬಳಿಕ ಮುಂದಿನ ಎರಡು ದಿನಗಳಲ್ಲಿ ಪೂರ್ಣ ಪ್ರಮಾಣದ ಸಂಪುಟ ರಚನೆಯನ್ನು ಮಾಡಲಾಗುತ್ತದೆ ಎಂಬ ಮಾಹಿತಿಯೂ ಇದೆ. ಸದ್ಯ ಆರೋಗ್ಯ ತುರ್ತು ಪರಿಸ್ಥಿತಿ ಹಾಗೂ ರಾಜ್ಯದಲ್ಲಿ ಅತಿವೃಷ್ಟಿಯಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇಂತಹ ಸಂಕಷ್ಟದ ಸಂದರ್ಭದಲ್ಲಿ ಹೆಚ್ಚುಕಾಲ ಪೂರ್ಣ ಪ್ರಮಾಣದ ಸಂಪುಟವಿಲ್ಲದೆ ಕೆಲಸ ಮಾಡುವುದು ಅಸಾಧ್ಯದ ಕೆಲಸ. ಹೀಗಾಗಿ ಮುಂದಿನ ಮೂರು ದಿನಗಳಲ್ಲಿ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವುದು ಅಲ್ಲದೆ, ಪೂರ್ಣ ಪ್ರಮಾಣದ ಸಂಪುಟವೂ ರಚನೆ ಆಗಲಿದೆ. ಆ ಮೂಲಕ ಸ್ವಪಕ್ಷದಲ್ಲಿನ ವಿರೋಧಿಗಳು ಹಾಗೂ ವಿರೋಧ ಪಕ್ಷಗಳಿಗೆ ಆಹಾರವಾಗುವುದನ್ನು ಬಿಜೆಪಿ ಹೈಕಮಾಂಡ್ ತಪ್ಪಿಸಲಿದೆ ಎಂದು ತಿಳಿದು ಬಂದಿದೆ
ಈ ಮೂಲಕ ಯಡಿಯೂರಪ್ಪ ಅವರ ಪಾಳಯದ ನಾಯಕನನ್ನೇ ಮುಖ್ಯಮಂತ್ರಿಯಾಗಿ ನೇಮಕ ಮಾಡಿ, ಬಿಎಸ್ವೈ ಅವರಿಗೂ ಬೇಸರವಾಗದಂತೆ ಹೈಕಮಾಂಡ್ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಆರ್ ಬೊಮ್ಮಾಯಿ ಪುತ್ರನಾಗಿರುವ ಅವರು, ಜನತಾದಳದಿಂದ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಜವಾಬ್ಧಾರಿ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಜತೆಗೆ 2008ರಿಂದ ಸತತ ಮೂರು ಬಾರಿ ಶಿಗ್ಗಾಂವ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದು, ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಮತ್ತು ಜಗದೀಶ ಶೆಟ್ಟರ ಸಿಎಂ ಆಗಿದ್ದ ವೇಳೆ ಐದು ವರ್ಷ ಜಲಸಂಪನ್ಮೂಲ ಖಾತೆ ನಿರ್ವಹಣೆ ಮಾಡಿದ ಅನುಭವ ಹೊಂದಿದ್ದಾರೆ. ಅಲ್ಲದೇ, ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ, ಶಾಸನ ರಚನಾ ಸಚಿವ ಹಾಗೂ ಹಾವೇರಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ನಿರ್ವಹಿಸಿದ ಅನುಭವಗಳನ್ನು ಬಸವರಾಜ ಬೊಮ್ಮಾಯಿ ಹೊಂದಿದ್ದಾರೆ.
ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಂದೆಯ ನಂತರ ಮಗ ಕೂಡ ಮುಖ್ಯಮಂತ್ರಿಯಾಗಿದ್ದಾರೆ. 1998-99ರಲ್ಲಿ ಎಸ್ ಆರ್ ಬೊಮ್ಮಾಯಿ ಜನತಾ ಪಕ್ಷದಿಂದ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಇದೀಗ ಬಸವರಾಜ್ ಬೊಮ್ಮಾಯಿ ಕೂಡ ಮುಖ್ಯಮಂತ್ರಿಯಾಗುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.