ರಿಯಾದ್: ಪ್ರಾರ್ಥನಾ ಸಮಯದಲ್ಲಿ ಸಾಮಾನ್ಯ ಅಂಗಡಿಗಳು ಸೇರಿದಂತೆ ಎಲ್ಲಾ ವಾಣಿಜ್ಯ ಸಂಸ್ಥೆಗಳನ್ನು ತೆರೆದಿಡಲು ಸೌದಿ ಅರೇಬಿಯಾ ಅನುಮತಿ ನೀಡಿದೆ.
ಸೌದಿ ಚೇಂಬರ್ಸ್ ಫೆಡರೇಶನ್ ಈ ಕುರಿತು ಸುತ್ತೋಲೆ ಹೊರಡಿಸಿದೆ. ಪ್ರಾರ್ಥನೆ ಸಮಯದಲ್ಲಿ ದೇಶದ ಎಲ್ಲಾ ನಗರಗಳಲ್ಲಿ ಅಂಗಡಿಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳನ್ನು ತೆರೆಯಬಹುದಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಸರ್ಕಾರದ ನಿರ್ಧಾರವು ಕೋವಿಡ್ ಹರಡುವುದನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿದೆ. ಕಾರ್ಮಿಕರು ಮತ್ತು ಗ್ರಾಹಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ರೋಗ ಹರಡುವ ಅಪಾಯವನ್ನು ತಪ್ಪಿಸುವುದು ಇದರ ಉದ್ದೇಶ. ತೆರೆದ ಅಂಗಡಿಗಳನ್ನು ಕಾಲಕಾಲಕ್ಕೆ ಮುಚ್ಚಬಾರದು. ಜನರು ಹೆಚ್ಚು ಕಾಯದೆ, ಅಗತ್ಯ ವಸ್ತುಗಳನ್ನು ಶೀಘ್ರದಲ್ಲೇ ಖರೀದಿಸಿ ತೆರಳಲು ಅನುಕೂಲವಾಗಲಿದೆ ಎಂದು ಫೆಡರೇಶನ್ ಸ್ಪಷ್ಟಪಡಿಸಿದೆ.
ಪ್ರಾರ್ಥನೆಯ ಸಮಯದಲ್ಲಿ ಅಂಗಡಿಗಳನ್ನು ಮುಚ್ಚುವ ದಶಕಗಳಷ್ಟು ಹಳೆಯ ಸಂಪ್ರದಾಯಕ್ಕೆ ಇದು ಒಂದು ಬದಲಾವಣೆಯಾಗಿದೆ. ಕಾರ್ಮಿಕರು ಮತ್ತು ಗ್ರಾಹಕರು ಪ್ರಾರ್ಥನೆಗೆ ಅಡ್ಡಿಯಾಗದಂತೆ ಹೊಸ ವ್ಯವಸ್ಥೆಗಳನ್ನು ಮಾಡಬೇಕೆಂದು ಫೆಡರೇಶನ್ ನಿರ್ದೇಶಿಸಿದೆ.