janadhvani

Kannada Online News Paper

ಜುಲೈ.5 ರಿಂದ ಅನ್‌ಲಾಕ್‌-3 ಜಾರಿ: ಇಂದು ಅಧಿಕಾರಿಗಳೊಂದಿಗೆ ಸಿಎಂ ಸಭೆ

ಬೆಂಗಳೂರು: ಅನ್‌ಲಾಕ್‌-3 ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಶುಕ್ರವಾರ ಮಹತ್ವದ ಸಭೆ ನಡೆಯಲಿದೆ. ಸೋಮವಾರದಿಂದ(ಜುಲೈ 5) ರಾಜ್ಯಾದ್ಯಂತ ಸಂಪೂರ್ಣ ಅನ್‌ಲಾಕ್‌ ಮಾಡುವ ಬಗ್ಗೆ ಈ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ನಿರೀಕ್ಷೆಯಿದೆ.

ರಾಜ್ಯದಲ್ಲಿಕೋವಿಡ್‌ ಸೋಂಕಿನ ಪ್ರಮಾಣ ತಗ್ಗಿದೆ. ಜತೆಗೆ ಪಾಸಿಟಿವಿಟಿ ದರ ಕಡಿಮೆ ಆಗಿದೆ. ಹಾಗಾಗಿ ಕಠಿಣ ನಿರ್ಬಂಧ ಮುಂದುವರಿಸುವ ಅಗತ್ಯವಿಲ್ಲ. ಆದರೆ, ಜನರು ಎಚ್ಚರಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು ಎಂದು ತಜ್ಞರ ಸಮಿತಿಯಿಂದಲೂ ಸರಕಾರಕ್ಕೆ ಅಭಿಪ್ರಾಯ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಡ್‌ ಉಸ್ತುವಾರಿ ಸಚಿವರು ಹಾಗೂ ಉನ್ನತಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ.

ಸದ್ಯಕ್ಕೆ ಜಾರಿಯಲ್ಲಿರುವ ಅನ್‌ಲಾಕ್‌-2 ಮಾರ್ಗಸೂಚಿಯಂತೆ ಅಂಗಡಿ ಮುಂಗಟ್ಟುಗಳನ್ನು ಸಂಜೆ 5 ಗಂಟೆಯವರೆಗೆ ತೆರೆಯಲು ಅವಕಾಶವಿದೆ. ಇದನ್ನು ಸಡಿಲಿಸಿ ರಾತ್ರಿ 8ರವರೆಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡುವ ಸಾಧ್ಯತೆಯಿದೆ. ಹಾಗೆಯೇ ನೈಟ್‌ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಲು ಸರಕಾರ ಪರಿಶೀಲಿಸುತ್ತಿದೆ ಎಂದು ತಿಳಿದು ಬಂದಿದೆ.

ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ

ಅನ್‌ಲಾಕ್‌-3 ರಲ್ಲಿ ಮಂದಿರ, ಮಸೀದಿ, ಚರ್ಚು ಮುಂತಾದ ಧಾರ್ಮಿಕ ಕೇಂದ್ರಗಳನ್ನು ತೆರೆಯುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಕೋವಿಡ್ ನಿಯಮಗಳನ್ನು ಪಾಲಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಂದಿರ, ಮಸೀದಿ, ಚರ್ಚುಗಳಿಗೆ ಪ್ರವೇಶಾನುಮತಿ ದೊರೆಯುವ ನಿರೀಕ್ಷೆಯಿದೆ.

ನಿಯಮ ಪಾಲನೆ ಕಡ್ಡಾಯ
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಮಾಸ್ಕ್‌ ಧರಿಸುವುದು, ಸ್ಯಾನಿಟೈಸ್‌ ಮಾಡಿಕೊಳ್ಳುವುದನ್ನು ಮುಂದುವರಿಸಬೇಕಾಗುತ್ತದೆ. ಸಭೆ, ಸಮಾರಂಭಗಳಿಗೆ ನಿರ್ಬಂಧ ಮುಂದುವರಿಯಲಿದೆ. ಶಾಪಿಂಗ್‌ ಮಾಲ್‌, ಸಿನಿಮಾ ಥಿಯೇಟರ್‌ ಪುನಃ ತೆರೆಯುವ ಬಗ್ಗೆ ಇನ್ನೂ ಸ್ಪಷ್ಟ ತೀರ್ಮಾನಕ್ಕೆ ಬರಲಾಗಿಲ್ಲ. ಸಭೆಯಲ್ಲಿ ಈ ಬಗ್ಗೆ ಕೂಲಂಕಷವಾಗಿ ಚರ್ಚಿಸಿದ ಬಳಿಕ ಸೂಕ್ತ ನಿರ್ಧಾರಕ್ಕೆ ಬರಲಾಗುತ್ತದೆ.

error: Content is protected !! Not allowed copy content from janadhvani.com