janadhvani

Kannada Online News Paper

ಗಾಯದ ಮೇಲೆ ಬರೆ: ಜುಲೈ 1 ರಿಂದ ಗ್ಯಾಸ್ ಸಿಲಿಂಡರ್ ಸಹಿತ ಹಲವು ದುಬಾರಿ

ಹೊಸದಿಲ್ಲಿ: ಪೆಟ್ರೋಲ್‌, ಡೀಸೆಲ್‌, ಅಡುಗೆ ಎಣ್ಣೆ ಸೇರಿ ಹಲವು ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಜನಜೀವನ ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ, ಜುಲೈ 1ರಿಂದ ಬ್ಯಾಂಕ್‌ ಸೇವಾ ಶುಲ್ಕ ಹೆಚ್ಚಳ ಸೇರಿ ಹಲವು ಸೇವೆ ದುಬಾರಿಯಾಗಲಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದವರಿಗೂ ಪರಿಣಾಮ ಬೀರಲಿದೆ.

1. ಎಸ್‌ಬಿಐ ಎಟಿಎಂಗಳಲ್ಲಿ ವಿತ್‌ಡ್ರಾ ಶುಲ್ಕ ಹೆಚ್ಚಳ: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಗ್ರಾಹಕರು ತಿಂಗಳಲ್ಲಿ ನಾಲ್ಕು ಬಾರಿ ಮಾತ್ರ (ಖಾತೆ ಇರುವ ಬ್ರ್ಯಾಂಚ್‌ ಅಥವಾ ಬೇರೆ ಬ್ರ್ಯಾಂಚ್‌ ಎಟಿಎಂ) ಶುಲ್ಕವಿಲ್ಲದೆ ಹಣ ಡ್ರಾ ಮಾಡಬಹುದು. ನಾಲ್ಕಕ್ಕಿಂತ ಹೆಚ್ಚಿನ ಸಲ ಬೇರೆ ಯಾವುದೇ ಎಸ್‌ಬಿಐ ಎಟಿಎಂಗಳಲ್ಲಿ ಹಣ ಡ್ರಾ ಮಾಡಿದರೆ ಪ್ರತಿ ವಿತ್‌ಡ್ರಾಗೆ 15 ರೂ. ಹಾಗೂ ಜಿಎಸ್‌ಟಿ ವಿಧಿಸಲಾಗುತ್ತದೆ.

2. ಎಸ್‌ಬಿಐ ಚೆಕ್‌ಬುಕ್‌ ಬಳಕೆ ಶುಲ್ಕ ಏರಿಕೆ: ಎಸ್‌ಬಿಐ ಚೆಕ್‌ ಬಳಕೆ ಶುಲ್ಕವೂ ಹೆಚ್ಚಿಸಿದ್ದು, ವಿತ್ತೀಯ ವರ್ಷದಲ್ಲಿ 10 ಚೆಕ್‌ ಮಾತ್ರ ಉಚಿತವಾಗಿ ಬಳಸಬಹುದಾಗಿದೆ. ಹಾಗೊಂದು ವೇಳೆ 10ಕ್ಕಿಂತ ಜಾಸ್ತಿ ಬಳಸಿದರೆ 40 ರೂ. ಹಾಗೂ ಜಿಎಸ್‌ಟಿ, 25 ಸಲ ಬಳಸಿದರೆ 75 ರೂ. ಮತ್ತು ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

3. ಎಲ್‌ಪಿಜಿ ಸಿಲಿಂಡರ್‌ ಬೆಲೆ ಹೆಚ್ಚಳ: ಪ್ರತಿ ತಿಂಗಳ ಮೊದಲ ದಿನದಂದು ಎಲ್‌ಪಿಜಿ ಸಿಲಿಂಡರ್‌ ಬೆಲೆ ಪರಿಷ್ಕರಣೆ ಮಾಡಲಾಗುತ್ತದೆ. ಇದುವರೆಗೆ ಎಲ್‌ಪಿಜಿ ಸಿಲಿಂಡರ್‌ ಬೆಲೆಯೇರಿಕೆ ಬಗ್ಗೆ ತೈಲ ಕಂಪನಿಗಳು ಘೋಷಿಸದಿದ್ದರೂ, ಜುಲೈ 1ರಂದು ಹೆಚ್ಚಿಸುವ ಸಾಧ್ಯತೆ ಇದೆ.

4. ಟಿಡಿಎಸ್‌ ದಂಡ ಜಾಸ್ತಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಎರಡು ವರ್ಷದಿಂದ ಟಿಡಿಎಸ್‌ ಸಲ್ಲಿಸದವರಿಗೆ ಹೆಚ್ಚಿನ ದಂಡ ವಿಧಿಸಲಾಗುತ್ತದೆ. ತೆರಿಗೆದಾರರ ವಾರ್ಷಿಕ ಟಿಡಿಎಸ್‌ 50 ಸಾವಿರ ರೂ. ಜಾಸ್ತಿ ಇದ್ದರೆ ಅವರಿಗೆ ಹೆಚ್ಚಿನ ದಂಡ ವಿಧಿಸುವ ನಿಯಮ ಜುಲೈ 1ರಿಂದ ಜಾರಿಗೆ ಬರಲಿದೆ.

5. ಹೀರೋ ದ್ವಿಚಕ್ರ ವಾಹನ ಬೆಲೆ ಏರಿಕೆ: ದ್ವಿಚಕ್ರ ವಾಹನ ತಯಾರಿಕಾ ದೈತ್ಯ ಸಂಸ್ಥೆ ಹೀರೋ ಮೋಟೋಕಾರ್ಪ್ ಬೈಕ್‌ ಹಾಗೂ ಸ್ಕೂಟಿಗಳ (ಶೋರೂಮ್‌ಗಳಲ್ಲಿ ನಿಗದಿಪಡಿಸಿದ ದರ) ಬೆಲೆಯನ್ನು ಜುಲೈ 1ರಿಂದ ಏರಿಕೆ ಮಾಡಲು ಸಂಸ್ಥೆ ನಿರ್ಧರಿಸಿದೆ.

6. ಸಿಂಡಿಕೇಟ್‌ ಬ್ಯಾಂಕ್‌ ಐಎಫ್‌ಎಸ್‌ಸಿ ಕೋಡ್‌ ಬದಲು: ಕೆನರಾ ಬ್ಯಾಂಕ್‌ ಜತೆ ಸಿಂಡಿಕೇಟ್‌ ಬ್ಯಾಂಕ್‌ ವಿಲೀನವಾದ ಕಾರಣ ಜುಲೈ 1ರಿಂದ ಸಿಂಡಿಕೇಟ್‌ ಬ್ಯಾಂಕ್‌ ಗ್ರಾಹಕರ ಐಎಫ್‌ಎಸ್‌ಸಿ ಕೋಡ್‌ ಬದಲಾಗಲಿದೆ. ಕೆನರಾ ಬ್ಯಾಂಕ್‌ ವೆಬ್‌ಸೈಟ್‌ನಿಂದ ಹೊಸ ಕೋಡ್‌ ಪಡೆಯಬಹುದು.

7. ಎರಡು ಬ್ಯಾಂಕ್‌ ಗ್ರಾಹಕರಿಗೆ ಹೊಸ ಚೆಕ್‌ ಬುಕ್‌: ಏಪ್ರಿಲ್‌ 1ರಿಂದ ಆಂಧ್ರ ಬ್ಯಾಂಕ್‌ ಹಾಗೂ ಕಾರ್ಪೊರೇಷನ್‌ ಬ್ಯಾಂಕ್‌ಗಳು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಜತೆ ವಿಲೀನವಾಗಿರುವ ಕಾರಣ ಎರಡೂ ಬ್ಯಾಂಕ್‌ ಗ್ರಾಹಕರಿಗೆ ಜುಲೈ 1ರಿಂದ ಹೊಸ ಚೆಕ್‌ ಬುಕ್‌ ನೀಡಲಾಗುತ್ತದೆ.

error: Content is protected !! Not allowed copy content from janadhvani.com