ಯುಎಇಗೆ ಭಾರತೀಯರ ಪ್ರವೇಶ ನಿಷೇಧ ಜುಲೈ 21 ರವರೆಗೆ ಮುಂದುವರಿಯುತ್ತದೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಟ್ರಾವೆಲ್ ಏಜೆನ್ಸಿಗಳು ಹೇಳುತ್ತಾರೆ.
ಪ್ರಯಾಣಿಕರ ಪ್ರೋಟೋಕಾಲ್ ನಲ್ಲಿ ಸ್ಪಷ್ಟತೆ ಲಭ್ಯವಾದಲ್ಲಿ, ಯಾವುದೇ ಸಮಯದಲ್ಲಿ ಭಾರತದಿಂದ ಸೇವೆಗಳನ್ನು ಪುನರಾರಂಭಿಸುವುದಾಗಿ ವಿಮಾನಯಾನ ಸಂಸ್ಥೆಗಳು ತಿಳಿಸಿವೆ.
ಪ್ರಯಾಣ ನಿಷೇಧಕ್ಕೆ ಸಂಬಂಧಿಸಿದಂತೆ ವಿಮಾನಯಾನ ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ಪ್ರಾಧಿಕಾರ ನೀಡಿದ ನೋಟಿಸ್‌ನಿಂದಾಗಿ ಈ ತಪ್ಪು ಕಲ್ಪನೆ ಉಂಟಾಗಿದೆ. ವಿಮಾನಯಾನ ಸಂಸ್ಥೆಗಳಿಗೆ ನೀಡಿರುವ ನೋಟಿಸ್ ಪ್ರಕಾರ, ಭಾರತ ಸೇರಿದಂತೆ 13 ದೇಶಗಳಿಗೆ ಜುಲೈ 21 ರವರೆಗೆ ವಿಮಾನ ಹಾರಾಟವನ್ನು ರದ್ದುಪಡಿಸಲಾಗಿದೆ.ಆದಾಗ್ಯೂ,ವಿಮಾನಯಾನ ಅಧಿಕಾರಿಗಳು ವಿಮಾನಯಾನ ಸಂಸ್ಥೆಗಳಿಗೆ ನೀಡುವ ಸಾಮಾನ್ಯ ಸೂಚನೆಯಾಗಿದೆ ಇದು.
ನಿರ್ಬಂಧಗಳು ಕೊನೆಗೊಳ್ಳುವ ಸಂಭವನೀಯ ದಿನಾಂಕವನ್ನು ನೋಟಿಸ್‌ನಲ್ಲಿ ನಮೂದಿಸುವುದು ಕಡ್ಡಾಯವಾಗಿರುವುದರಿಂದ ಜುಲೈ 21 ರ ದಿನಾಂಕವನ್ನು ನಿಗದಿಪಡಿಸಲಾಗಿದೆ. ಈ ದಿನದ ಮೊದಲು ಅಥವಾ ನಂತರ ನಿರ್ಬಂಧಗಳನ್ನು ತೆಗೆದುಹಾಕಬಹುದು.
ಕೆಟ್ಟ ಹವಾಮಾನ, ರನ್ವೇ ರಿಪೇರಿ ಮತ್ತು ವಿಪತ್ತುಗಳ ಸಂದರ್ಭಗಳಲ್ಲಿ ಈ ರೀತಿ ದಿನಾಂಕವನ್ನು ನಿಗದಿ ಪಡಿಸಿದ ಸೂಚನೆಗಳನ್ನು ನೀಡಲಾಗುತ್ತದೆ. ಆದರೆ,ನಿಗದಿತ ದಿನಾಂಕದ ಮುಂಚಿತವಾಗಿ ನಿರ್ಬಂಧಗಳನ್ನು ತೆರವುಗೊಳಿಸುವುದು ಸಾಮಾನ್ಯ. ಸಾಧ್ಯವಾದಷ್ಟು ಬೇಗ ನಿಷೇಧವನ್ನು ತೆಗೆದುಹಾಕಲು ಯುಎಇ ಸರ್ಕಾರ ಮುಂದಾಗಿದೆ.
ಎಮಿರೇಟ್ಸ್, ಇತ್ತಿಹಾದ್ ಮತ್ತು ಏರ್ ಇಂಡಿಯಾ ಜುಲೈ 6 ರವರೆಗೆ ಪ್ರಯಾಣ ನಿಷೇಧವನ್ನು ಘೋಷಿಸಿವೆ. ಜುಲೈ 7 ರಿಂದ ಸೇವೆ ಪುನರಾರಂಭಿಸುವುದಾಗಿ ಎಮಿರೇಟ್ಸ್ ಪ್ರಕಟಿಸಿದೆ.