janadhvani

Kannada Online News Paper

ವಿಮಾನಯಾನ ಸೇವೆ ಪುನರಾರಂಭ- ವಿವಿಧ ದೇಶಗಳ ಮನವೊಲಿಕೆಗೆ ಮುಂದಾದ ಭಾರತ

ನವದೆಹಲಿ:ದೇಶದಲ್ಲಿ ಕೋವಿಡ್ ಪ್ರಕರಣಗಳು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ವಿಮಾನಯಾನ ಸೇವೆಗಳನ್ನು ಪುನರಾರಂಭಿಸುವಂತೆ ಭಾರತ, ವಿವಿಧ ದೇಶಗಳ ಮನವೊಲಿಕೆಗೆ ಮುಂದಾಗಿದೆ. ಪ್ರಯಾಣ ನಿಷೇಧವನ್ನು ತೆಗೆದುಹಾಕಲು ವಿವಿಧ ದೇಶಗಳೊಂದಿಗೆ ಚರ್ಚೆಯನ್ನು ಪ್ರಾರಂಭಿಸಲಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿದೆ.

ಮುನ್ನೆಚ್ಚರಿಕೆ ಕ್ರಮಗಳನ್ನು ಬಲಪಡಿಸಿ, ವಿಮಾನ ಪ್ರಯಾಣಕ್ಕೆ ಅನುವು ಮಾಡಿಕೊಡಲು ಕೇಂದ್ರ ಸರ್ಕಾರ ಚರ್ಚೆಗೆ ಮುಂದಾಗಿದೆ.ಕೋವಿಡ್ ಎರಡನೇ ತರಂಗದ ಹಿನ್ನೆಲೆಯಲ್ಲಿ ಅನೇಕ ದೇಶಗಳು ಭಾರತದ ಮೇಲೆ ಪ್ರಯಾಣ ನಿಷೇಧವನ್ನು ವಿಧಿಸಿವೆ.ಏಪ್ರಿಲ್ನಲ್ಲಿ ಏರ್ಪಡಿಸಿದ್ದ ನಿಷೇಧವು ಅನಿರ್ದಿಷ್ಟವಾಗಿ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಭಾರತ ಮಧ್ಯಪ್ರವೇಶಿಸಿದೆ.

ಭಾರತವು ಗಲ್ಫ್ ಸೇರಿದಂತೆ 20 ಕ್ಕೂ ಹೆಚ್ಚು ದೇಶಗಳಿಗೆ ಏರ್ ಬಬಲ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮರುಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ.ದಿನಕ್ಕೆ ನಾಲ್ಕು ಲಕ್ಷಕ್ಕೂ ಅಧಿಕವಾಗಿದ್ದ ಕೋವಿಡ್ ರೋಗಿಗಳ ಸಂಖ್ಯೆ ಈಗ ಅರ್ಧ ಲಕ್ಷಕ್ಕಿಂತ ಕಡಿಮೆಯಾಗಿದೆ. ಲಸಿಕೆ ಹಾಕಿದವರಿಗೆ ಪ್ರಯಾಣಿಸಲು ಅನುಮತಿ ನೀಡುವ ಯುರೋಪಿಯನ್ ರಾಷ್ಟ್ರಗಳ ಕ್ರಮದಿಂದ ಭಾರತವೂ ಪ್ರೇರಿತವಾಗಿದೆ.

ಪ್ರಯಾಣವನ್ನು ಪುನರಾರಂಭಿಸಲು ಸರ್ಕಾರ ವಿವಿಧ ದೇಶಗಳೊಂದಿಗೆ ಚರ್ಚೆಯನ್ನು ಮುಂದುವರಿಸಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಕ್ಷಿ ಹೇಳಿದ್ದಾರೆ.

error: Content is protected !! Not allowed copy content from janadhvani.com