ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಬಹಿರಂಗ ಪ್ರಕರಣದಲ್ಲಿ ತನ್ನನ್ನು ಬಂಧಿಸದಂತೆ ಎಸ್‌ಐಟಿಗೆ ನಿರ್ದೇಶನ ನೀಡಬೇಕೆಂಬ ಸಂತ್ರಸ್ತೆಯ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿಲ್ಲ.
ರಮೇಶ್ ಜಾರಕಿಹೊಳಿ ಅವರು ಸದಾಶಿವನಗರ ಠಾಣೆಯಲ್ಲಿ ದಾಖಲಿಸಿರುವ ದೂರನ್ನು ರದ್ದು ಮಾಡುವಂತೆ ಯುವತಿ ಸಲ್ಲಿಸಿದ್ದ ಅರ್ಜಿ, ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕ ಸದಸ್ಯಪೀಠದ ಮುಂದೆ ವಿಚಾರಣೆಗೆ ಬಂತು. ಯುವತಿ ಪರ ವಾದಿಸಿದ ವಕೀಲ ಸಂಕೇತ್ ಏಣಗಿ, ‘ಅತ್ಯಾಚಾರ ಆರೋಪ ಸಂಬಂಧ ಆರೋಪಿ ರಮೇಶ್ ಜಾರಕಿಹೊಳಿಯನ್ನು ತನಿಖಾಧಿಕಾರಿಗಳು ಬಂಧಿಸಿಲ್ಲ. ಆದರೆ, ಅದರ ಬದಲಿಗೆ ದೂರು ನೀಡಿರುವ ಯುವತಿಯನ್ನೇ ಬಂಧಿಸುವ ಸಾಧ್ಯತೆ ಇದೆ. ಇದರಿಂದ ಆಕೆಗೆ ಬಂಧನ ಭೀತಿ ಇದೆ. ಆಕೆಯನ್ನು ಬಂಧಿಸದಂತೆ ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು’ ಎಂದು ಕೋರಿದರು.
ಅದಕ್ಕೆ ನ್ಯಾಯಪೀಠ, ‘ರಮೇಶ್ ಜಾರಕಿಹೊಳಿ ದಾಖಲಿಸಿರುವ ದೂರು ರದ್ದು ಕೋರಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್ 482 ಅಡಿ ಸಲ್ಲಿಸಿದ ಅರ್ಜಿ ಇದಾಗಿದೆ. ಹಾಗಾಗಿ, ಅರ್ಜಿದಾರಳನ್ನು ಬಂಧಿಸದಂತೆ ಇದರಲ್ಲಿ ಸೂಚಿಸಲಾಗದು. ಅಗತ್ಯವಿದ್ದರೆ ನಿರೀಕ್ಷಣಾ ಜಾಮೀನು ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸಬಹುದು’ ಎಂದು ತಿಳಿಸಿತು. ಎಸ್‌ಐಟಿ ಪರ ವಾದಿಸಿದ ಎಸ್‌ಪಿಪಿ ಪಿ.ಪ್ರಸನ್ನಕುಮಾರ್, ‘ಪ್ರಕರಣ ಸಂಬಂಧ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಪಿಐಎಲ್‌ಗಳ ವಿಚಾರಣೆ ಇದೆ. ವಿಭಾಗೀಯಪೀಠ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದೆ. ಹಾಗಾಗಿ ಈ ಅರ್ಜಿಯ ವಿಚಾರಣೆ ಮುಂದೂಡಬೇಕು’ ಎಂದು ಮನವಿ ಮಾಡಿದರು.
ಆ ಮನವಿ ಪರಿಗಣಿಸಿದ ನ್ಯಾಯಪೀಠ, ವಿಚಾರಣೆಯನ್ನು ಜು.6ಕ್ಕೆ ಮುಂದೂಡಿತು. ಮತ್ತೊಂದೆಡೆ ಸಿ.ಡಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಮತ್ತು ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ ನಗರ ಪೊಲೀಸ್ ಆಯುಕ್ತರ ಆದೇಶ ರದ್ದು ಕೋರಿ ಸಲ್ಲಿಸಲಾಗಿದ್ದ ಪ್ರತ್ಯೇಕ ಪಿಐಎಲ್‌ಗಳ ವಿಚಾರಣೆ ಸಮಯದ ಅಭಾವದಿಂದ ಜೂ.25ಕ್ಕೆ ಮುಂದೂಡಲಾಗಿದೆ.