ಮಡಿಕೇರಿ ಜೂನ್ 23: ಕೋವಿಡ್ 19 ರ ಸಮಸ್ಯೆಯಿಂದಾಗಿ ಶಾಲಾ,ಕಾಲೇಜು ವಿದ್ಯಾರ್ಥಿಗಳು ಮತ್ತು ವೈದ್ಯಕೀಯ ವಿಭಾಗವು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಕೊಡಗಿನ ಜಿಲ್ಲಾಧಿಕಾರಿ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕರಾದ ಶ್ರೀ ಅಪ್ಪಚ್ಚು ರಂಜನ್ ರವರ ಮೂಲಕ ಶಿಕ್ಷಣ ಸಚಿವರಿಗೆ ಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಆನ್ಲೈನ್ ತರಗತಿಯ ಹೆಸರಿನಲ್ಲಿ ಶುಲ್ಕ ಮತ್ತು ಡೊನೇಶನ್ ರೂಪದಲ್ಲಿ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ತೊಂದರೆ ನೀಡುತ್ತಿರುವ ಮತ್ತು “ಅರಿವು ಲೋನ್” ಮಂಜೂರು, ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶದ ಗೊಂದಲ, NCAHP-21 ಬಿಲ್ ಅನುಷ್ಠಾನಗೊಳಿಸುವುದು ಸೇರಿದಂತೆ ಹಲವು ವಿಚಾರಗಳನ್ನು ಉಲ್ಲೇಖಿಸಿ ಮನವಿ ನೀಡಲಾಗಿದೆ.
ಈ ಕುರಿತು ಮಾತನಾಡಿದ ಶಾಸಕರು ಈ ಸಮಸ್ಯೆಗಳನ್ನು ಪರಿಶೀಲನೆ ಮಾಡಿ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಸ್ಎಸ್ಎಫ್ ಕೊಡಗು ಜಿಲ್ಲಾ ಅಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆ ಪ್ರಧಾನ ಕಾರ್ಯದರ್ಶಿ ಮುಜೀಬ್ ಕೊಂಡಂಗೇರಿ ಹೊಸತೋಟದ ಉನೈಸ್ ಶಿಹಾಬ್ ತಂಙ್ಞಳ್ ಸಲೀಂ ಮುಂತಾದ ನಾಯಕರು ಭಾಗಿಯಾಗಿದ್ದರು.
ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಶಾಸಕರುಗಳ ಮುಖಾಂತರ ಶಿಕ್ಷಣ ಸಚಿವರಿಗೆ ಎಸ್ಸೆಸ್ಸೆಫ್‌ನಿಂದ ಇದೇ ರೀತಿ ಮನವಿ ಸಲ್ಲಿಸಲಾಗುತ್ತಿದ್ದು ನಾಳೆ ವಿರಾಜಪೇಟೆ ಕ್ಷೇತ್ರ ಶಾಸಕರಾದ ಕೆ.ಜಿ ಬೋಪಯ್ಯನವರಿಗೂ ಮನವಿ ಸಲ್ಲಿಸಲಾಗುವುದು ಎಂದು ಎಸ್ಎಸ್ಎಫ್ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಜುನೈದ್ ನೆಲ್ಯಾಹುದಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.