janadhvani

Kannada Online News Paper

ದ.ಕ.ಜಿಲ್ಲೆಯನ್ನೂ ಅನ್‌ಲಾಕ್ ಮಾಡಿ-ಅಂಗಡಿ ಮಾಲೀಕರಿಂದ ಪ್ರತಿಭಟನೆ

ಮಂಗಳೂರು,ಜೂ.21: ರಾಜ್ಯ ಸರಕಾರ ಶೇ.5ಕ್ಕಿಂತ ಕಡಿಮೆ ಕೋವಿಡ್ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಜೂ.21ರಿಂದ ಶೇ.50ರಷ್ಟು ಸಾರಿಗೆ ಸಹಿತ ಸಂಪೂರ್ಣ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದೆ. ಆದರೆ ಶೇ.5ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇರುವ ಕಾರಣಕ್ಕೆ ದ.ಕ ಜಿಲ್ಲೆಯನ್ನು ಆ ಪಟ್ಟಿಯಿಂದ ಕೈಬಿಟ್ಟಿದೆ.

ಇದೀಗ ದಕ್ಷಿಣ ಕನ್ನಡ ಜಿಲ್ಲೆಯನ್ನೂ ಅನ್‌ಲಾಕ್ ಮಾಡುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿದೆ. ಮಾತ್ರವಲ್ಲ, ಇಂದು ಬೆಳಿಗ್ಗೆ ಜಿಲ್ಲಾಡಳಿತ ಕಚೇರಿ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದ ನೂರಾರು ಸಂಖ್ಯೆಯಲ್ಲಿದ್ದ ಜವಳಿ ಹಾಗೂ ಚಪ್ಪಲಿ ಅಂಗಡಿ ಮಾಲಕರು ಅಂಗಡಿ ತೆರೆಯಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.ವರ್ತಕರು, ಕೆಲಸಗಾರರು ಕಳೆದ 2 ತಿಂಗಳಿನಿಂದ ಕೆಲಸವಿಲ್ಲದೆ ದಿನದೂಡುತ್ತಿದ್ದಾರೆ. ಲಾಕ್ ಡೌನ್ ಪರಿಣಾಮ, ಜನ ಸಂಕಷ್ಟಗೊಳಗಾಗುತ್ತಿದ್ದಾರೆ. ತಮಗೆ ವ್ಯಾಪಾರ ಮಾಡಲು ಅವಕಾಶ ಕೋರಿ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಪೂರ್ಣ ಲಾಕ್ ಡೌನ್ ಸಡಿಲಿಕೆಯ ಭಾಗ್ಯ ದೊರೆತರೆ, ಮಂಗಳೂರಿಗೆ ಮಾತ್ರ ಹಾಫ್ ಲಾಕ್ ಡೌನ್ ಹೇರಲಾಗಿದೆ. ಕಳೆದ ಎರಡು ತಿಂಗಳಿನಿಂದ ಜನರು ಕೆಲಸವಿಲ್ಲದೆ, ಜಿಲ್ಲಾಡಳಿತದ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ.
ನಿನ್ನೆಯಷ್ಟೇ (ಜೂ.20) ಜಿಲ್ಲಾಧಿಕಾರಿ ಜುಲೈ 5 ರವರೆಗೆ ಹಾಫ್ ಲಾಕ್ ಡೌನ್ ಘೋಷಿಸಿ, ಅಗತ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನ 1 ಗಂಟೆಯವರೆಗೆ ಅವಕಾಶ ನೀಡಿ ಆದೇಶ ಹೊರಡಿಸಿದ್ದರು.

ಶೀಘ್ರದಲ್ಲೇ ಲಾಕ್ ಡೌನ್ ಪೂರ್ಣ ಸಡಿಲಿಕೆ- ಉಸ್ತುವಾರಿ ಸಚಿವರ ಭರವಸೆ

ಇತ್ತ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ವಾರದ ಬಳಿಕ ಜಿಲ್ಲೆಯಲ್ಲಿ ಪೂರ್ಣ ಲಾಕ್ ಡೌನ್ ಸಡಿಲಿಕೆಗೆ ಚಿಂತನೆ ನಡೆಸಲಾಗುವುದು ಎಂದಿದ್ದಾರೆ.ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ 7.5 ರಿಂದ 5.5 ಕ್ಕೆ ಕುಸಿದಿದೆ. ಮೂರು ನಾಲ್ಕು ದಿನಗಳಲ್ಲಿ ಜನತೆ ಕಟ್ಟುನಿಟ್ಟಿನ ಲಾಕ್ ಡೌನ್ ಕೈಗೊಂಡರೆ ಶೇ 3 ರಿಂದ 4 ಕ್ಕೆ ಪಾಸಿಟಿವಿಟಿ ದರ ಇಳಿಯಬಹುದು. ಆವಾಗ ಪೂರ್ಣ ಲಾಕ್ ಡೌನ್ ಸಡಿಲಿಕೆಗೆ ಕ್ರಮ ಕೈಗೊಳ್ಳಬಹುದು ಎಂದಿದ್ದಾರೆ.ಜಿಲ್ಲೆಯಲ್ಲಿ ಬಸ್ ಸಂಚಾರ ಆರಂಭಿಸುವಂತೆ ಜನಸಾಮಾನ್ಯರು ಒತ್ತಾಯಿಸುತ್ತಿದ್ದು ವಾರದ ಬಳಿಕ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಜವಳಿ ಮಳಿಗೆ ವರ್ತಕರು ಅಂಗಡಿ ತೆರೆಯಲು ಅವಕಾಶ ನೀಡುವಂತೆ ಮನವಿ ಮಾಡಿದ್ದು, ಈ ಬಗ್ಗೆ ಎರಡು ಮೂರು ದಿನಗಳಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಉಸ್ತುವಾರಿ ಮಂತ್ರಿ ಕೋಟಾ ಶ್ರೀನಿವಾಸ್ ಪೂಜಾರಿ ಮಾಹಿತಿ ನೀಡಿದ್ದಾರೆ. ವಾರದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೂರ್ಣ ಲಾಕ್ ಡೌನ್ ಸಡಿಲಿಕೆಗೆ ಗಂಭೀರ ಚಿಂತನೆ ನಡೆಯುತ್ತಿದೆ.

error: Content is protected !! Not allowed copy content from janadhvani.com