janadhvani

Kannada Online News Paper

ಕೇರಳದಲ್ಲೊಂದು ವಿಶೇಷ ನಿಕಾಹ್: ಖಲೀಲ್ ತಂಙಳರು ಮನತುಂಬಿ ಬರೆದ ಫೇಸ್ಬುಕ್ ಪೋಸ್ಟ್

ಕೇರಳದಲ್ಲೊಂದು ವಿಶೇಷ ನಿಕಾಹ್ (ಮದುವೆ)ಯಲ್ಲಿ ಭಾಗವಹಿಸಿದ ಖಲೀಲ್ ಅಲ್ ಬುಖಾರಿ ಉಸ್ತಾದರ ಹೃದಯತುಂಬಿಬರುವ, ಕನ್ನಡೀಕರಿಸಿದ ಫೇಸ್ಬುಕ್ ಪೋಸ್ಟ್

ಸಂತೋಷ ಕಣ್ಣೀರಿನೊಂದಿಗೆ ಬರೆಯುತ್ತಿದ್ದೇನೆ. ಪ್ರಿಯ ಶಿಷ್ಯಂದಿರಾದ ಜಲಾಲುದ್ದೀನ್ ಅದನಿ ಹಾಗೂ ಹಾಫಿಳ್ ತ್ವಾಹಾ ಮೆಹಬೂಬ್‌ರ ವಿವಾಹ ಸುದಿನವಿಂದು. ಇರುಳಾವೃತವಾದ ಲೋಕದಿಂದ ಬೆಳಕಿನಿಂದ ಪ್ರಜ್ವಲಿಸುವ ಜಗಕೆ ಕಾಲಿಡುವ ಎರಡು ಪ್ರತಿಭೆಗಳ ಮಾಂಗಲ್ಯ ದಿನ. ಕಾಕತಾಳೀಯವೆಂಬಂತೆ ಈರ್ವರ ನಿಕಾಹ್ ಕೂಡಾ ಒಂದೇ ದಿನ. ಅಲ್ಲಾಹನಿಗೆ ಸರ್ವ ಸ್ತುತಿಸ್ತೋತ್ರಗಳು.

ಬಾಲ್ಯದಿಂದಲೇ ಅಂಧರಾಗಿದ್ದರೂ ಅವರಿಬ್ಬರಿಗೂ ಅಡತಡೆ ನಿವಾರಿಸುವ ಮನೋದಾರ್ಢ್ಯತೆಯಿದ್ದವು. ಸಮಸ್ಯೆ ನೂರಾರಿದ್ದರೂ ಈ ಮನೋಭಾವದಿಂದಲೇ ಈರ್ವರೂ ಹಲವಾರು ಕ್ಷೇತ್ರಗಳಲ್ಲಿ ಸಾಧನೆಯ ಪರಾಕಾಷ್ಠೆ ತಲುಪಿದರು. ಮಅ್‌ದಿನ್ ಅಕಾಡೆಮಿ ಹಾಗೂ ಅವರ ಕುಟುಂಬಗಳಿಟ್ಟ ನಿರೀಕ್ಷೆ ಹುಸಿಯಾಗಲಿಲ್ಲ.
ಅಲ್‌ಹಮ್ದುಲಿಲ್ಲಾಹ್!

ಅದನಿ ಬಿರುದಾಂಕಿತವಾಗಿ ಅರಬಿ ಭಾಷೆಯಲ್ಲಿ ಜೆ. ಆರ್. ಎಫ್ ಪದವಿ ಪಡೆದ ಜಲಾಲುದ್ದೀನ್ ಅದನಿ ಹಾಗೂ 160 ರಾಷ್ಟ್ರಗಳ ಸ್ಪರ್ದಾರ್ಥಿಗಳು ಭಾಗವಹಿಸಿದ ದುಬೈ ಅಂತರಾಷ್ಟ್ರೀಯ ಹೋಲಿ ಖುರ್‌ಆನ್ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ತ್ವಾಹಾ ಮೆಹಬೂಬ್ ಮಿನುಗು ತಾರೆಗಳಾದರು.

ಮಅ್‌ದಿನ್ ಬ್ಲೈಂಡ್ ಸ್ಕೂಲಿಗೆ ಅಡ್ಮಿಷನ್ ಪಡೆದ ತ್ವಾಹಾ ನಂತರ ಮಅ್‌ದಿನ್ ತಹ್ಫೀಳಿಲ್ ಖರ್‌ಆನ್ ಕಾಲೇಜಿನಲ್ಲಿ ಖುರ್‌ಆನ್ ಸಂಪೂರ್ಣ ಕಂಠಪಾಠ ಮಾಡಿ ಸಂಸ್ಥೆಗೂ ಕುಟುಂಬಕ್ಕೂ ಹೆಮ್ಮೆಯ ನಿಮಿಷಗಳನ್ನು ಪ್ರಸ್ತುತಪಡಿಸಿದರು. ಅರಬಿಕ್ ಅಕ್ಷರಗಳೂ ಪರಿಚಯವಿರದೆ ಸಂಸ್ಥೆಗೆ ಬಂದ ಜಲಾಲುದ್ದೀನ್ ಅದನಿ ಈಗ ಕ್ಯಾಲಿಕಟ್ ಯುನಿವರ್ಸಿಟಿಯಲ್ಲಿ ಪಿ.ಎಚ್.ಡಿ ಮಾಡಲು ತಯಾರಿ ನಡೆಸುತ್ತಿದ್ದಾರೆ.

ಅಂಗವಿಕಲರಿಗಾಗಿ ವಿಶೇಷ ಸಂಸ್ಥೆಯನ್ನು ಪ್ರಾರಂಭಿಸಲು ಮಅ್‌ದಿನ್ ನಿರ್ಧರಿಸಿದ ಸಮಯದಲ್ಲಿ ಕೆಲವು ನಿರುತ್ಸಾಹದ ಪ್ರತಿಕ್ರಿಯೆ ಬಂದವು. ನನ್ನೊಂದಿಗಿರುವ ಪ್ರೀತಿಯಿಂದ ಇಂತಹ ಸಂಸ್ಥೆಗಳ ಸಂಬಂಧಿಸಿದಂತೆ ಹಲವು ದೂರದೃಷ್ಟಿಯ ನಕಾರಾತ್ಮಕ ಸಲಹೆಗಳು ಬಂದವು. ಅದಾಗ್ಯೂ ಎಲ್ಲವನ್ನೂ ಅಲ್ಲಾಹನಿಗರ್ಪಿಸಿ ಸ್ಪೆಶಲ್ ಸ್ಕೂಲ್ ಪ್ರಾರಂಭಿಸಿದೆವು. ನಾವು ನಿರ್ಲಕ್ಷ್ಯ ವಹಿಸಿ ಈ ಗುರಿಯಿಡದೆ ಪ್ರಾರಂಭಿಸದಿದ್ದರೆ ಇಂತಹಾ ಅನರ್ಘ್ಯ ಪ್ರತಿಭೆಗಳು ಹೊರಬರುತ್ತಿದ್ದರೇ ಎಂದು ನಾವು ಆಲೋಚಿಸಬೇಕಾಗಿದೆ.

ಮಅ್‌ದಿನ್ ಅಕಾಡೆಮಿ 24 ಸಂವತ್ಸರಗಳನ್ನು ಪೂರ್ತೀಕರಿಸಿದ ಈ ಸಂದರ್ಭದಲ್ಲಿ ‘ಏಬಳ್ ವರ್ಲ್ಡ್’ನ ಅಧೀನದಲ್ಲಿ ವಿಕಲ ಚೇತನ ಶಾಲೆಗಳನ್ನು ವಿವಿಧ ಭಾಗಗಳಲ್ಲಿ ವಿಸ್ತರಿಸಬೇಕೆಂಬ ಇರಾದೆಯೂ ಇದೆ.

ಮಅ್‌ದಿನ್ ಅಕಾಡೆಮಿಗೆ ಮಾನಸಿಕ, ದೈಹಿಕ ಮತ್ತು ಆರ್ಥಿಕ ನೆರವು ನೀಡುವವರಿಗೆ, ವಿಶ್ವಾಸಿಗಳಿಗೆ ಇಂದು ಅತ್ಯಂತ ಸಂತೋಷದಾಯಕ ದಿನ. ಅಂಗವಿಕಲರನ್ನು ನಮ್ಮೊಂದಿಗೆ ಕೈ ಹಿಡಿದು ಸಾಗಿಸಲು ಮತ್ತು ಮುಂದುವರಿಯಲು ಸಾಧ್ಯವಾಗಬೇಕು. ದೈನ್ಯತೆ ನೋಡಿ ಅವರಲ್ಲಿ ಕೀಳರಿಮೆ ಮೂಡಿಸದೆ ಅವಕಾಶಗಳನ್ನು ನೀಡಿ ಮಾನಸಿಕವಾಗಿ ಸಶಕ್ತಗೊಳಿಸುವ ವಿವೇಕ ನಮಗಿರಬೇಕು. ನಮ್ಮಂತೆಯೇ ಅವರು ಒಡನಾಡಿ ಬದುಕು ಸವೆಸಲು ಇಷ್ಟಪಡುವರು ಜೊತೆಗೆ ನಾಳಿನ ಜೀವನದ ಸುಂದರ ಕನಸುಗಳ ಈಡೇರಿಸುವ ಭರವಸೆಯನ್ನು ಹೊಂದಿರುವವರು.

ಈ ರೀತಿಯ ಸಾವಿರಾರು ಜನರ ಬ್ಯಾಕ್ ಬೋನ್ ಆಗಲು ಸಾಧ್ಯವಾಗಬೇಕು. ನಮ್ಮ ಆರೈಕೆಯಲ್ಲಿ ಅವರ ಕಣ್ಣುಗಳು ತುಂಬಿ ಅವರ ಮನದಾಳದ ಪ್ರಾರ್ಥನೆ ಲಭಿಸಬೇಕು..

ಅಲ್ಲಾಹನ ಅನುಗ್ರಹದೊಂದಿಗೆ ಈ ಸಂತಸದ ನಿಮಿಷವನ್ನು ಒಳಿತಿನೊಂದಿಗೆ ನಿಂತವರು, ಬಿಕ್ಕಟ್ಟಿನ ಸಮಯದಲ್ಲಿ ಕೈ ಹಿಡಿಯುವವರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಅನುವಾದ– ಅಶ್ರಫ್ ನಾವೂರು, ಕೆ.ಜಿ.ಎನ್ ಮಿತ್ತೂರು

ಅವರ ಪೇಜಿನಲ್ಲಿ ನಿಮ್ಮ ಅಭಿನಂದೆಗಳನ್ನು ಸಲ್ಲಿಸಬಹುದು.
https://m.facebook.com/story.php?story_fbid=340521560769072&id=100044336923771

error: Content is protected !! Not allowed copy content from janadhvani.com