ಬೆಂಗಳೂರು,ಜೂ.11: ಕರ್ನಾಟಕದಲ್ಲಿ ಮುಂಗಾರಿನ ಅಬ್ಬರ ಶುರುವಾಗಿದ್ದು, ಇಂದಿನಿಂದ ರಾಜ್ಯಾದ್ಯಂತ ಮಳೆ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದಿನಿಂದ 1 ವಾರಗಳ ಕಾಲ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಮಳೆ ತೀವ್ರಗೊಳ್ಳಲಿದೆ. ದಕ್ಷಿಣ ಒಳನಾಡಿನಲ್ಲಿಯೂ ಇಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಇಂದಿನಿಂದ ಜೂನ್ 13ರವರೆಗೆ ಭಾರೀ ಮಳೆಯಾಗಲಿದೆ. ಅದಾದ ಬಳಿಕವೂ ಮೂರ್ನಾಲ್ಕು ದಿನ ಮಳೆ ಮುಂದುವರೆಯಲಿದೆ. ಇಂದಿನಿಂದ ಭಾರೀ ಮಳೆಯಾಗುವ ನಿರೀಕ್ಷೆ ಇರುವುದರಿಂದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇಂದಿನಿಂದ 3 ದಿನ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗಲಿದೆ.
ಕರಾವಳಿ ಜಿಲ್ಲೆಗಳಲ್ಲಿ ಜೂನ್ 14ರಂದು ಮಳೆ ಹೆಚ್ಚಾಗುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯಿಂದ ಭೂಕುಸಿತವಾಗುವ ಸಾಧ್ಯತೆಯೂ ಇದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಹೀಗಾಗಿ, ದಕ್ಷಿಣ ಕನ್ನಡ, ಉಡುಪಿ, ರಾಯಚೂರು, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎಸ್ಡಿಆರ್ಎಫ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಮಳೆಯ ಅಬ್ಬರ ಹೆಚ್ಚಾಗಿದೆ. ಕರಾವಳಿ ಮಾತ್ರವಲ್ಲದೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೀದರ್, ಗದಗ , ಬೆಂಗಳೂರು ನಗರ, ಕಲಬುರ್ಗಿ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೋಲಾರ, ತುಮಕೂರು, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿಯೂ ಇಂದಿನಿಂದ 1 ವಾರ ಮಳೆಯಾಗಲಿದೆ. ಹೀಗಾಗಿ, ಹಳದಿ ಅಲರ್ಟ್ ಘೋಷಿಸಲಾಗಿದೆ.
ಜೂನ್ 3ಕ್ಕೆ ಕೇರಳವನ್ನು ಪ್ರವೇಶಿಸಿರುವ ಮುಂಗಾರು ಕರ್ನಾಟಕಕ್ಕೆ ಎಂಟ್ರಿ ನೀಡಲು ಮೂರ್ನಾಲ್ಕು ದಿನಗಳು ಬೇಕಾಗುತ್ತದೆ ಎನ್ನಲಾಗಿತ್ತು. ಆದರೆ, ಜೂನ್ 5ಕ್ಕೇ ಕರ್ನಾಟಕಕ್ಕೆ ಮುಂಗಾರಿನ ಪ್ರವೇಶವಾಗಿದೆ. ಜೂನ್ ಮೂರನೇ ವಾರದ ವೇಳೆಗೆ ಕರ್ನಾಟಕದಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದೆ. ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಇಂದು ಸಾಧಾರಣ ಮಳೆಯಾಗಲಿದೆ. ಮಲೆನಾಡಿನಲ್ಲಿ ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದೆ.