janadhvani

Kannada Online News Paper

ಸರಕಾರಿ ಮೆಡಿಕಲ್ ಕಾಲೇಜಿಗೆ ಆಗ್ರಹಿಸಿ ಜನಾಂದೋಲನ : ಕ್ಯಾಂಪಸ್ ಫ್ರಂಟ್

ಮಂಗಳೂರು: ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ಮೆಡಿಕಲ್ ಮಾಫಿಯಾದ ಪ್ರಕರಣ ಇದು ಇಂದು ನಿನ್ನೆಯ ಘಟನೆಯಲ್ಲ, ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಕೇಳಿ ಬರುತ್ತಿರುವ ವೈದ್ಯಕೀಯ ಕ್ಷೇತ್ರದ ಕಾರ್ಪೊರೇಟ್ ಮಾಫಿಯಾವಾಗಿದೆ. ಜಿಲ್ಲೆಯ ಜನ ಸಾಮಾನ್ಯರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಗಳಿಗೆ ತೆರಳಲು ಭಯ, ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣವೆಂಬದು ಕನಸು ಮಾತ್ರ ಇಂತಹ ಪರಿಸ್ಥಿತಿಯಿದೆ, ಈ ಪರಿಸ್ಥಿತಿಯನ್ನು ಜನಾಂದೋಲನದ ಮೂಲಕ ಬದಲಾವಣೆಗೊಳಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ಸಮಿತಿಯು ಆಗ್ರಹಿಸುತ್ತಿದೆ.

ಜಿಲ್ಲೆಯನ್ನು ಗಮನಿಸಿ ನೋಡಿದರೆ ವೈದ್ಯಕೀಯ ಖಾಸಗೀಕರಣ ಹೆಚ್ಚಾಗಿದ್ದು ಮಂಗಳೂರಿನ ಹೆಸರಾಂತ ಎಲ್ಲಾ ಮೆಡಿಕಲ್ ಕಾಲೇಜುಗಳು ಹಾಗೂ ಆಸ್ಪತ್ರೆಗಳನ್ನು ಕಾರ್ಪೊರೇಟರ್ ವ್ಯಕ್ತಿಗಳು ಚಲಾಯಿಸುತ್ತಿದ್ದು, ಜಿಲ್ಲೆಯಲ್ಲಿ ಒಂದು ಸರಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿಲ್ಲ ಒಂದೇ ಒಂದು ಸರಕಾರಿ ಮೆಡಿಕಲ್ ಕಾಲೇಜುಗಳಿಲ್ಲ ಇದರಿಂದಾಗಿ ಹಲವಾರು ವಿದ್ಯಾರ್ಥಿಗಳು ವೈದ್ಯರಾಗಬೇಕೆಂಬ ಕನಸು,ವೈದ್ಯಕೀಯ ಶಿಕ್ಷಣದಲ್ಲಿ ಪದವಿ ಪಡೆಯಬೇಕೆಂಬ ಕನಸು ಬರೇ ಕನಸಾಗಿಯೇ ಉಳಿದಿದೆ. ಯಾಕಾಗಿ ಇಲ್ಲಿನ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರವು ಹಲವು ವರ್ಷಗಳ ಬೇಡಿಕೆಯಾದ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವುದರ ಬಗ್ಗೆ ಮತ್ತು ಸರ್ಕಾರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವುದರ ಬಗ್ಗೆ ಯಾಕೆ ಮುತುವರ್ಜಿ ವಹಿಸುವುದಿಲ್ಲ ಎಂಬ ಪ್ರಶ್ನೆ ಹಾಗೇ ಉಳಿದಿದೆ . ಪುತ್ತೂರು ತಾಲೂಕಿನಲ್ಲಿ ಮೆಡಿಕಲ್ ಕಾಲೇಜಿಗಾಗಿ ಕಾಯ್ದಿರಿಸಿದ ಸ್ಥಳದಲ್ಲಿ ಕೆಲವೊಂದು ಕಾಣದ ಕೈಗಳ ,ಕಾರ್ಪೊರೇಟ್ ಕುಳಗಳ ಕುಮ್ಮಕ್ಕಿನಿಂದ ಸೀ ಫುಡ್ ಪಾರ್ಕ್ ನಿರ್ಮಿಸಲು ಮುಂದಾದಾಗ ಕ್ಯಾಂಪಸ್ ಫ್ರಂಟ್‌ನ ಹೋರಾಟದಿಂದ ನಿರ್ಣಯವನ್ನು ಹಿಂಪಡೆಯಲು ಸಾಧ್ಯವಾಯಿತು. ಆದರೆ ಆ ಸ್ಥಳದಲ್ಲಿ ಇನ್ನೂ ಕೂಡ ಮೆಡಿಕಲ್ ಕಾಲೇಜು ಸ್ಥಾಪನೆಯ ಬಗ್ಗೆ ಸರಕಾರ ಮುತುವರ್ಜಿ ವಹಿಸುತ್ತಿಲ್ಲ.

ಈಗ ಜಿಲ್ಲೆಯಲ್ಲಿ ಇರುವಂತಹ ಖಾಸಗಿ ಮೆಡಿಕಲ್ ಕಾಲೇಜುಗಳನ್ನು ಗಮನಿಸಿದರೆ ನೊಂದಾವಣೆ ಪ್ರಾರಂಭವಾಗುದಕ್ಕಿಂತ ಮುಂಚಿತವಾಗಿ ಸೀಟ್‌ಗಳು ಮುಗಿದಿರುತ್ತದೆ, ಏಕೆಂದರೆ ಎಲ್ಲಾ ಸೀಟ್‌ಗಳನ್ನು ಏಜೆಂಟ್‌ಗಳು ಖರೀದಿಸಿ ಲಕ್ಷ-ಲಕ್ಷ ಹಣಕ್ಕೆ ಕಾಲೇಜು ಸೀಟು ಮಾರುತ್ತಿದ್ದಾರೆ. ಇಂದು ಶಿಕ್ಷಣ ಕ್ಷೇತ್ರವೆಂಬುವುದು ವ್ಯಾಪಾರವಾಗಿ ಮಾರ್ಪಟ್ಟಿದೆ.
ಗರ್ಭಿಣಿ ಮಹಿಳೆಯನ್ನು ಏಳೆಂಟು ಆಸ್ಪತ್ರೆಗಳಿಗೆ ಅಲೆದಾಡುವಂತೆ ಮಾಡಿದ ಅಮಾನವೀಯ ಹಾಗೂ ಪೈಶಾಚಿಕ ಘಟನೆ ಮಂಗಳೂರಲ್ಲಿ ನಡೆದಿದ್ದು , ಆರೋಗ್ಯ ಕ್ಷೇತ್ರದಲ್ಲಿ ದೇಶದಲ್ಲೇ ಹೆಸರುವಾಸಿ ಯಾದ ಹಾಗೂ ವಿದ್ಯಾವಂತರ ಜಿಲ್ಲೆಯೆಂದು ಕರೆಸಿಕೊಳ್ಳುವ ಮಂಗಳೂರಿನ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ .ಇದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ನಗರ ಜಿಲ್ಲೆ ತೀವ್ರವಾಗಿ ಖಂಡಿಸುತ್ತಿದೆ.
ಒಟ್ಟಾರೆಯಾಗಿ ಜಿಲ್ಲೆಯಲ್ಲಿ “ಮೆಡಿಕಲ್ ಕಾರ್ಪೊರೇಟ್ ಮಾಫಿಯಾ” ಹೇರಳವಾಗಿದ್ದು, ಜನ ಸಾಮಾನ್ಯರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗಳು ಜಿಲ್ಲೆಯಲ್ಲಿ ನಿಲ್ಲಬೇಕಿದ್ದರೆ ಕಾರ್ಪೊರೇಟ್ ಮಾಫಿಯಾವನ್ನು ನಿಲ್ಲಿಸಬೇಕು ಹಾಗೂ ಸರಕಾರಿ ಮೆಡಿಕಲ್ ಕಾಲೇಜಿಗೆ ಆಗ್ರಹಿಸಿ ಜನಾಂದೋಲನದ ಅವಶ್ಯಕತೆಯಿದೆ. ಕ್ಯಾಂಪಸ್ ಫ್ರಂಟ್ ಈ ಜನಾಂದೋಲನವನ್ನು ಜಿಲ್ಲೆಯಲ್ಲಿ ಕ್ರಾಂತಿಕಾರಿ ಹೋರಾಟವಾಗಿ ಮುಂದಿನ ದಿನಗಳಲ್ಲಿ ನಡೆಸಲಿಕ್ಕಿದೆ ಎಂಬ ಎಚ್ಚರಿಕೆಯನ್ನು ಈ ಪತ್ರಿಕಾಗೋಷ್ಠಿಯ ಮುಖಾಂತರ ನೀಡುತ್ತಿದ್ದೇವೆ.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ :-

ಸವಾದ್ ಕಲ್ಲರ್ಪೆ ( ರಾಜ್ಯ ಕೋಶಾಧಿಕಾರಿ, ಕ್ಯಾಂಪಸ್ ಫ್ರಂಟ್ ಕರ್ನಾಟಕ)

ಸಿರಾಜ್ ಮಂಗಳೂರು ( ಜಿಲ್ಲಾ ಮುಖಂಡರು, ಕ್ಯಾಂಪಸ್ ಫ್ರಂಟ್ ದ.ಕ )

ಅರ್ಫೀದ್ ಅಡ್ಕಾರ್ ( ಜಿಲ್ಲಾ ಮುಖಂಡರು, ಕ್ಯಾಂಪಸ್ ಫ್ರಂಟ್ ದ.ಕ )

ಇನಾಯತ್ ಮಂಗಳೂರು ( ಜಿಲ್ಲಾಧ್ಯಕ್ಷರು, ಕ್ಯಾಂಪಸ್ ಫ್ರಂಟ್ ಮಂಗಳೂರು ನಗರ )

ಸರಫುದ್ದೀನ್ ಮಂಗಳೂರು ( ಅಧ್ಯಕ್ಷರು, ಕ್ಯಾಂಪಸ್ ಫ್ರಂಟ್ ಮಂಗಳೂರು ಗ್ರಾಮಾಂತರ)

error: Content is protected !! Not allowed copy content from janadhvani.com