janadhvani

Kannada Online News Paper

ಸೆಕೆಂಡ್ ಪಿಯುಸಿ ಪರೀಕ್ಷೆಯಿಲ್ಲ, SSLC ಯಲ್ಲಿ ಯಾರನ್ನೂ ಫೇಲ್ ಮಾಡುವುದಿಲ್ಲ- ಶಿಕ್ಷಣ ಸಚಿವ

ಬೆಂಗಳೂರು: ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಈಗ ನಡೆಸಲ್ಲ. ಹೀಗಾಗಿ ಪ್ರಥಮ ಪಿಯುಸಿ ಫಲಿತಾಂಶ ಆಧರಿಸಿ ಗ್ರೇಡಿಂಗ್ ನೀಡಲಾಗುವುದು. ಫಲಿತಾಂಶ ಸಮಾಧಾನವಿಲ್ಲದಿದ್ದರೆ ಮತ್ತೊಮ್ಮೆ ಪರೀಕ್ಷೆ ಮಾಡುತ್ತೇವೆ. ಬೇಕೆಂದರೆ ಕೊರೊನಾ ಕಡಿಮೆಯಾದ ನಂತರ ಪರೀಕ್ಷೆ ಮಾಡುತ್ತೇವೆ. ಸದ್ಯ ದ್ವಿತೀಯ ಪಿಯುಸಿಯ ಎಲ್ಲ ವಿದ್ಯಾರ್ಥಿಗಳು ಪಾಸ್ ಹಾಗೂ ಎಸ್ಎಸ್ಎಲ್ಸಿ ಮಕ್ಕಳಿಗೆ ಪರೀಕ್ಷೆ ಮಾಡಲಾಗುವುದು ಆದರೆ ಫೇಲ್ ಮಾಡೋದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ಪರೀಕ್ಷೆ ನಡೆದಿಲ್ಲ ಎಂಬ ಬೇಸರ ಬೇಡ
ದ್ವಿತೀಯ ಪರೀಕ್ಷೆ ನಡೆಸಲು ಹೋದರೆ ಕನಿಷ್ಟ 12 ದಿನ ಬೇಕಾಗುತ್ತದೆ. ಹೀಗಾಗಿ ನೀವು ಈ ಬಗ್ಗೆ ಬೇಸರವಾಗುವುದು ಬೇಡ. ಬದಲಾಗಿ ನೀಟ್ ಮತ್ತು ಸಿಇಟಿ ಪರೀಕ್ಷೆಗಳತ್ತ ಹೆಚ್ಚು ಗಮನ ಕೊಟ್ಟು ತಯಾರಿ ನಡೆಸಿ. ಅಷ್ಟಾದರೂ ಅಸಮಾಧಾನವಿದೆ ಎಂದಾದಲ್ಲಿ ಅಂತಹವರಿಗೆ ಮಾತ್ರ ಪರೀಕ್ಷೆ ವ್ಯವಸ್ಥೆ ಮಾಡೋಣ ಎಂದು ಸಚಿವರು ಮಕ್ಕಳಿಗೆ ಭರವಸೆ ನೀಡಿದ್ದಾರೆ.

ಈ ಬಾರಿ ಕೇವಲ ಗ್ರೇಡಿಂಗ್
ಈ ಬಾರಿ ಅಂಕಪಟ್ಟಿಯಲ್ಲಿ ಮಕ್ಕಳು ಎಷ್ಟು ಅಂಕ ಪಡೆದಿದ್ದಾರೆ ಎಂದು ನೀಡಲಾಗುವುದಿಲ್ಲ. ಬದಲಾಗಿ ಗ್ರೇಡಿಂಗ್ ನೀಡಲಾಗುವುದು. ಒಂದು ವೇಳೆ ಪ್ರಥಮ ಪಿಯುಸಿ ಪರೀಕ್ಷೆ ಗ್ರೇಡಿಂಗ್ ಬಗ್ಗೆ ಅಸಮಾಧಾನವಿದ್ದರೆ ಅವರು ಪರೀಕ್ಷೆ ಬರೆಯುತ್ತೇವೆಂದು ತಿಳಿಸಬಹುದು. ಕೊರೊನಾ ಕಡಿಮೆಯಾದ ನಂತರ ಅವರಿಗೆ ವ್ಯವಸ್ಥೆ ಮಾಡಿಕೊಡುವ ಬಗ್ಗೆ ಯೋಚಿಸಲಾಗುವುದು ಎಂದು ತಿಳಿಸಿದ್ದಾರೆ.

ಎಸ್ಎಸ್ಎಲ್ಸಿ ಮಕ್ಕಳಿಗೆ ಜುಲೈ ಮೂರನೇ ವಾರದಲ್ಲಿ ಪರೀಕ್ಷೆ ನಡೆಸುತ್ತೇವೆ ಎನ್ನುವುದು ಈಗಿನ ನಿರ್ಧಾರ. ಆದರೆ, ಮೂರನೇ ಅಲೆಯನ್ನು, ಅದರ ಪರಿಸ್ಥಿತಿಯನ್ನು ಈಗ ನಿರ್ಧರಿಸಲಾಗುವುದಿಲ್ಲ. ಆಗ ಪರಿಸ್ಥಿತಿಗೆ ತಕ್ಕಂತೆ ಮತ್ತೆ ನಿರ್ಧರಿಸುವುದೇ ಸೂಕ್ತ ಎಂದಿದ್ದಾರೆ.ಪ್ರಥಮ ಪಿಯುಸಿ ಫಲಿತಾಂಶ ಆಧರಿಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗ್ರೇಡಿಂಗ್ ಕೊಡುವುದನ್ನು ಬಿಟ್ಟರೆ ನಮ್ಮ ಬಳಿ ಬೇರೆ ಆಯ್ಕೆಯೇ ಇಲ್ಲ ಎಂದು ಸಚಿವ ಸುರೇಶ್ ಕುಮಾರ್‌ ಹೇಳಿಕೆ ನೀಡಿದ್ದಾರೆ.

SSLCಯಲ್ಲಿ ಯಾರನ್ನೂ ಫೇಲ್ ಮಾಡುವುದಿಲ್ಲ. 120 ಅಂಕಗಳಿಗೆ ಮಲ್ಟಿಪಲ್ ಚಾಯ್ಸ್ ಪ್ರಶ್ನೆಪತ್ರಿಕೆ. ಪ್ರತಿ ವಿಷಯಕ್ಕೆ 40 ಅಂಕಗಳು ಇರುತ್ತದೆ ಎಂದು ತಿಳಿಸಿದ್ದಾರೆ. ಜುಲೈ ಕೊನೆಯ ವಾರ ಅಥವಾ ಆಗಸ್ಟ್‌ನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ನೀಡುತ್ತೇವೆ ಎಂದು ಹೇಳಿದ್ದಾರೆ.

ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಲಸಿಕೆ ಪಡೆದಿರಬೇಕು
ಎಸ್ಎಸ್ಎಲ್ಸಿ ಪರೀಕ್ಷೆ ದಿನ ಕೊಠಡಿ ಮೇಲ್ವಿಚಾರಕರು ಲಸಿಕೆ ಪಡೆದಿರಬೇಕು ಎಂದು ನಿಯಮ ರೂಪಿಸಿದ್ದೇವೆ.

ಮೊದಲೇ ಮಾದರಿ ಪ್ರಶ್ನೆ ಪತ್ರಿಕೆಯನ್ನು ನೀಡುತ್ತೇವೆ. ಅದನ್ನು ನೋಡಿಕೊಂಡು ಸಿದ್ಧತೆ ಮಾಡಿಕೊಳ್ಳಿ. ಒತ್ತಡವಾಗಲಿ, ಆತಂಕವಾಗಲೀ ಬೇಡ. ಅತ್ಯಂತ ಸರಳ ಹಾಗೂ ನೇರ ಪ್ರಶ್ನೆಗಳನ್ನಷ್ಟೇ ಕೇಳಲಾಗುವುದು. ಒಂದು ಡೆಸ್ಕ್‌ಗೆ ಒಬ್ಬ ವಿದ್ಯಾರ್ಥಿಯನ್ನು ಕೂರಿಸುತ್ತೇವೆ. ಪರೀಕ್ಷೆ ಬರೆಯುವ ಎಲ್ಲರಿಗೂ N95 ಮಾಸ್ಕ್ ನೀಡುತ್ತೇವೆ. ಮಾದರಿ ಪ್ರಶ್ನೆಪತ್ರಿಕೆ ಶಾಲೆಗಳಿಗೆ ಕಳಿಸಲು ವ್ಯವಸ್ಥೆ ಆಗಿದೆ. ವೆಬ್‌ಸೈಟ್‌ನಲ್ಲೂ ಮಾದರಿ ಪ್ರಶ್ನೆಪತ್ರಿಕೆ ಹಾಕಲಾಗುವುದು. SSLCಯಲ್ಲಿ ಯಾರನ್ನೂ ಫೇಲ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜುಲೈ 3ನೇ ವಾರದಲ್ಲಿ ಪರೀಕ್ಷೆ ನಡೆಸಲು ತೀರ್ಮಾನ. 20 ದಿನ ಮುಂಚಿತವಾಗಿ ಪರೀಕ್ಷೆ ದಿನಾಂಕ ಘೋಷಣೆ ಮಾಡಲಾಗುವುದು. ಕೊವಿಡ್ ಕಾರಣದಿಂದ ಪರೀಕ್ಷೆ ಬರೆಯಲು ಆಗದಿದ್ದರೆ. ಅಂತಹ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅವಕಾಶವಿದೆ. ಹೊಸ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. 6 ಸಾವಿರ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುವುದು. ಈ ಬಾರಿ ದುಪ್ಪಟ್ಟು ಕೇಂದ್ರಗಳಲ್ಲಿ ಪರೀಕ್ಷೆ ಮಾಡುತ್ತೇವೆ. ಒಂದು ಕೊಠಡಿಯಲ್ಲಿ 10-12 ಜನ ಕೂರಿಸಿ ಪರೀಕ್ಷೆ ನಡೆಸುತ್ತೇವೆ.ಎಸ್ಎಸ್ಎಲ್ಸಿಗೂ ಗ್ರೇಡ್ ಆಧಾರಿತ ಅಂಕ ನೀಡಲಾಗುವುದು. ಎ, ಎ ಪ್ಲಸ್ ಮಾದರಿಯಲ್ಲಿ ಗ್ರೇಡ್ ವ್ಯವಸ್ಥೆ ಇರಲಿದೆ.

ಎರಡೇ ಪ್ರಶ್ನೆ ಪತ್ರಿಕೆ
ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಈ ಮೂರು ವಿಷಯಗಳನ್ನು ಸೇರಿಸಿ ಒಂದು ಪೇಪರ್, ಬಹು ಆಯ್ಕೆ ಪ್ರಶ್ನೆಗಳನ್ನು ಕೇಳಲಾಗುವುದು. ಸರಳ ಹಾಗೂ ನೇರ ಪ್ರಶ್ನೆಗಳಿರಲಿವೆ. ಇನ್ನೊಂದು ಪತ್ರಿಕೆ ಭಾಷಾ ವಿಷಯಗಳು ಇರಲಿವೆ.

error: Content is protected !! Not allowed copy content from janadhvani.com