janadhvani

Kannada Online News Paper

ಜೂನ್ 7ರ ಬಳಿಕ ಲಾಕ್‌ಡೌನ್‌ ಸಡಿಲಿಕೆ.? – ಯಾವುದಕ್ಕೆಲ್ಲಾ ಅನುಮತಿ?

ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜೂನ್ 7ರವರೆಗೆ ಲಾಕ್ಡೌನ್ ಘೋಷಿಸಿದೆ. ಜೂನ್ 7ರ ಬಳಿಕ ಲಾಕ್ಡೌನ್ ವಿಸ್ತರಿಸಬೇಕೇ? ಬೇಡವೇ? ಎಂಬ ಬಗ್ಗೆ ತಜ್ಞರು ಮತ್ತು ತಾಂತ್ರಿಕ ಸಲಹಾ ಸಮಿತಿಯವರು ಈಗಾಗಲೇ ವರದಿ ತಯಾರಿಸಿದ್ದಾರೆ. ನಾಳೆ ಹಿರಿಯ ಸಚಿವರ ಜೊತೆ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದು, ಇಂದು ಕೊರೋನಾ ತಜ್ಞರು ನೀಡಿರುವ ವರದಿ ಬಗ್ಗೆ‌ ನಾಳೆ ಚರ್ಚೆ ನಡೆಯಲಿದೆ. ಕೊರೋನಾ ಸ್ಥಿತಿಗತಿಯ ಬಗ್ಗೆ ಸಚಿವರ ಜೊತೆ ಸಿಎಂ ಯಡಿಯೂರಪ್ಪ ಚರ್ಚಿಸಲಿದ್ದಾರೆ. ಸಚಿವರು, ತಜ್ಞರ ಜೊತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಿರುವ ಸಿಎಂ ಯಡಿಯೂರಪ್ಪ ಲಾಕ್‌ಡೌನ್ ಅಥವಾ ಅನ್ ಲಾಕ್ ಎಂಬುದರ ಕುರಿತು ಜೂನ್ 4 ಅಥವಾ 5ರಂದು ಅಂತಿಮ ತೀರ್ಮಾನ ಮಾಡಲಿದ್ದಾರೆ.

ಲಾಕ್‌ಡೌನ್ ಮುಂದುವರಿದರೆ ಆಗುವ ಆರ್ಥಿಕ ಸಮಸ್ಯೆ ಬಗ್ಗೆ ಸಿಎಂ ಯಡಿಯೂರಪ್ಪನವರಿಗೆ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಲಾಕ್‌ಡೌನ್ ತೆರವು ಸೂಕ್ತ ಎಂದು ಅಧಿಕಾರಿಗಳಿಂದ ಸಿಎಂಗೆ ಅಭಿಪ್ರಾಯ ಸಲ್ಲಿಕೆ ಮಾಡಲಾಗಿದೆ. ರಾಜ್ಯಮತ್ತು ಬೆಂಗಳೂರಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಜೂನ್ 7ರ ಬಳಿಕ ಲಾಕ್‌ಡೌನ್‌ನಲ್ಲಿ ಸಡಿಲಿಕೆ ಮಾಡಿ, ಆರ್ಥಿಕ ಚಟುವಟಿಕೆಗಳಿಗೆ ಹಂತ ಹಂತವಾಗಿ ಅವಕಾಶ ಮಾಡಿಕೊಡಬೇಕು. ಲಾಕ್‌ಡೌನ್ ವೇಳೆ ಕೊರೊನಾ ನಿರ್ವಹಣೆಗಾಗಿ ಅಗತ್ಯವಿರುವ ಬೆಡ್ ಪ್ರಮಾಣ, ಆಕ್ಸಿಜನ್, ಐಸಿಯು ಬೆಡ್, ಸಿಸಿಸಿಗಳನ್ನು ಸರ್ಕಾರ ಏರಿಕೆ ಮಾಡಲಾಗುತ್ತಿದೆ. ಕೋವಿಡ್ ನಿರ್ವಹಣೆಗೆ ಬೇಕಾಗಿರುವ ಮೂಲಸೌಕರ್ಯಗಳನ್ನು ವೇಗವಾಗಿ ವೃದ್ಧಿಸಲಾಗುತ್ತಿದೆ. ಹಂತ ಹಂತವಾಗಿ ಅನ್ಲಾಕ್ ಮಾಡುವುದು ಒಳಿತು ಎಂದು ಆರ್ಥಿಕ ಇಲಾಖೆ ಸಲಹೆ ನೀಡಿದೆ.

ಈ ಹಿನ್ನೆಲೆಯಲ್ಲಿ ಅನ್‌ಲಾಕ್ ಮಾರ್ಗಸೂಚಿ ಸಿದ್ಧಪಡಿಸಲಾಗುತ್ತಿದೆ. ಕಳೆದ ಬಾರಿಯ ರಾಷ್ಟ್ರೀಯ ಲಾಕ್‌ಡೌನ್ ವೇಳೆ ಅನುಸರಿಸಲಾದ ಅನ್‌ಲಾಕ್ ಮಾರ್ಗಸೂಚಿಯನ್ನೇ ಈ ಬಾರಿಯೂ ಜಾರಿ ಮಾಡೋ ಬಗ್ಗೆ ಸಲಹೆ ನೀಡಲಾಗಿದೆ. ಆರ್ಥಿಕ ಚಟುವಟಿಕೆ ನಿಧಾನವಾಗಿ ಪ್ರಾರಂಭವಾಗಬೇಕು. ಇಲ್ಲವಾದರೆ ರಾಜ್ಯದ ಆರ್ಥಿಕತೆ ಸಂಪೂರ್ಣ ಕುಸಿಯಲಿದೆ. ಹೀಗಾಗಿ ಅನ್‌ಲಾಕ್ ಮಾಡುವುದು ಅನಿವಾರ್ಯ ಎಂದು ಖಡಕ್ ಆಗಿ ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದಕ್ಕೆಲ್ಲಾ ಅನುಮತಿ?

  • ಕೈಗಾರಿಕಾ ಚಟುವಟಿಕೆಗಳಿಗೆ ಅನುಮತಿ
  • ಸಾರಿಗೆ ಸಂಚಾರಕ್ಕೆ ನಿರ್ಬಂಧಿತ ಅವಕಾಶ
  • ಓಲಾ, ಉಬರ್, ಆಟೋ ಸಂಚಾರಕ್ಕೆ ಅನುಮತಿ
  • ಮಾಲ್, ವಾಣಿಜ್ಯ ಸಂಕೀರ್ಣಗಳಿಗೆ 50% ಅನುಮತಿ
  • ಸಾರ್ವಜನಿಕ ವಾಹನಗಳಲ್ಲಿ 50% ಪ್ರಯಾಣಿಕರಿಗೆ ಅವಕಾಶ
  • ಅಗತ್ಯೇತರ ಅಂಗಡಿ ಮುಂಗಟ್ಟಿಗೂ ನಿರ್ಬಂಧಿತ ಅವಕಾಶ
  • ಹೋಟೆಲ್, ಬಾರ್, ರೆಸ್ಟೋರೆಂಟ್ ನಿರ್ಬಂಧಿತ ಅವಕಾಶ
  • ಮೈಕ್ರೋ ಕಂಟೈನ್ಮೆಂಟ್ ಝೋನ್ಗೆ ಹೆಚ್ಚಿನ ಒತ್ತು
  • ಮದುವೆ, ಸಮಾರಂಭಕ್ಕೂ ನಿರ್ಬಂಧಿತ ಅವಕಾಶ
  • ಧಾರ್ಮಿಕ ಕೇಂದ್ರಗಳಿಗೆ ನಿರ್ಬಂಧಿತ ಅವಕಾಶ

ಯಾವುದಕ್ಕೆಲ್ಲಾ ನಿರ್ಬಂಧ?

  • ಪ್ರಕರಣ ಹೆಚ್ಚಿರುವ ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧ ವಿಸ್ತರಣೆ
  • ಸಭೆ ಸಮಾರಂಭ, ರಾಜಕೀಯ ಸಭೆ, ಗುಂಪು ಸೇರುವಿಕೆಗೆ ನಿಷೇಧ
  • ನೈಟ್ ಕರ್ಫ್ಯೂ ಮುಂದುವರಿಸಲು ಚಿಂತನೆ
  • ಕಠಿಣ ನಿಯಂತ್ರಕ ಕ್ರಮಗಳು ಮುಂದುವರಿಕೆ
  • ಸದ್ಯ ಪಬ್, ಜಿಮ್, ಈಜುಕೊಳ, ಸಿನಿಮಾ ಥಿಯೇಟರ್ಗೆ ನಿಷೇಧ
  • ಸಿನಿಮಾ, ಧಾರವಾಹಿ ಹಾಗೂ ಇತರೆ ಚಿತ್ರೀಕರಣಕ್ಕೆ ನಿಷೇಧ ಮುಂದುವರಿಕೆ

ಬೆಂಗಳೂರಿನಲ್ಲಿ ಅನ್ಲಾಕ್ಗೆ ಚಿಂತನೆ?

ಕೋವಿಡ್ ಹಬ್ ಎಂದೇ ಕುಖ್ಯಾತಿ ಪಡೆದಿದ್ದ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕೊಂಚ ಕಡಿಮೆಯಾಗುತ್ತಿದೆ. ಜೂನ್ 7ರ ನಂತರ ಹಂತ ಹಂತವಾಗಿ ಅನ್ಲಾಕ್ಗೆ ಬಿಬಿಎಂಪಿ ಮನಸು ಮಾಡಿದೆ. ಗಣನೀಯವಾಗಿ ಸೋಂಕಿನ ಪ್ರಮಾಣ ಇಳಿಕೆಯಾಗಿದೆ. ಈಗ ಅನ್ ಲಾಕ್ ಮಾಡಬಹುದು. ಇನ್ನಷ್ಟು ದಿನಗಳು ಲಾಕ್ ಡೌನ್ ಮಾಡಿದರೆ ಪರಿಸ್ಥಿತಿ ನಿಭಾಯಿಸುವುದು ಕಷ್ಟ. ಅದರಿಂದ ಆದಾಯಕ್ಕೆ ಹೊಡೆತ ಬೀಳುತ್ತದೆ. ಆಡಳಿತ ಕೂಡ ಕಷ್ಟವಾಗಬಹುದು. ಜನಜೀವನ ಎಂದಿನಂತಾದರೆ ಸ್ವಲ್ಪ ನೆಮ್ಮದಿ ಸಿಗಬಹುದು ಎಂಬ ಕಾರಣಕ್ಕೆ ಹಂತ ಹಂತವಾಗಿ ಲಾಕ್ ಡೌನ್ ತೆರವಿಗೆ ಬಿಬಿಎಂಪಿ ಸಲಹೆ ಕೊಟ್ಟಿದೆ.

error: Content is protected !! Not allowed copy content from janadhvani.com