ದೆಹಲಿ: ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ ಹಂತ ಹಂತವಾಗಿ ಇಳಿಕೆಯಾಗುತ್ತಿದ್ದರೂ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇನ್ನೂ ಕಡಿಮೆ ಆಗಿಲ್ಲ. ಹಾಗಾಗಿ ಕೊವಿಡ್-19 ಪ್ರಕರಣಗಳ ಹರಡುವಿಕೆ ತಡೆಗಟ್ಟಲು ಲಾಕ್ಡೌನ್, ಕಠಿಣ ನಿಯಮಾವಳಿಗಳನ್ನು ಜೂನ್ 30ರ ವರೆಗೆ ಮುಂದುವರಿಸುವಂತೆ ಕೇಂದ್ರ ಗೃಹ ಇಲಾಖೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ವಿಪತ್ತು ನಿರ್ವಹಣಾ ಕಾಯ್ದೆ 2005ರ ಪ್ರಕಾರ ಏಪ್ರಿಲ್ 29ರಂದು ಕೇಂದ್ರ ಗೃಹ ಇಲಾಖೆ ಹೊರಡಿಸಿದ್ದ ಆಜ್ಞೆಯಂತೆ ಮತ್ತು ಏಪ್ರಿಲ್ 25ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದ್ದ ಮಾರ್ಗಸೂಚಿಗಳಂತೆ ಕೊವಿಡ್-19 ಸೋಂಕು ತಡೆಯ ಮಾರ್ಗಸೂಚಿಗಳು ಜೂನ್ 30ರ ವರೆಗೆ ಊರ್ಜಿತವಾಗಿರುತ್ತದೆ ಎಂದು ಕೇಂದ್ರ ಸರ್ಕಾರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿರುವ ಆದೇಶ ಪತ್ರದಲ್ಲಿ ಸೂಚಿಸಲಾಗಿದೆ.
ಕೊರೊನಾ ಸೋಂಕಿನ ವಿರುದ್ಧ ಕೈಗೊಂಡ ಕಠಿಣ ನಿಯಮಾವಳಿಗಳು, ಕಂಟೈನ್ಮೆಂಟ್ ಮತ್ತು ಇತರ ನಿಯಮಾವಳಿಗಳಿಂದಾಗಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಕೊರೊನಾ ಹೊಸ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದರೂ ಸದ್ಯ ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆಯಲ್ಲಿ ಇನ್ನಷ್ಟು ಇಳಿಕೆಯಾಗಬೇಕಿದೆ. ಹಾಗಾಗಿ, ಸೂಕ್ತ ನಿಯಮಗಳನ್ನು ಮುಂದುವರಿಸಲು ಪತ್ರದಲ್ಲಿ ಹೇಳಲಾಗಿದೆ.
ನಿಯಮಾವಳಿಗಳಲ್ಲಿ ಯಾವುದೇ ಸಡಿಲಿಕೆ ಮಾಡುವುದಿದ್ದರೂ ಅದನ್ನು ಹಂತಹಂತವಾಗಿ, ಪರಿಸ್ಥಿತಿಯನ್ನು ಅವಲೋಕಿಸಿ ಮಾಡಬೇಕು. ಸ್ಥಳೀಯ ವ್ಯವಸ್ಥೆ, ಸಂಪನ್ಮೂಲವನ್ನು ಕೂಡ ಈ ನೆಲೆಯಲ್ಲಿ ಪರಿಗಣಿಸಬೇಕು ಎಂದು ತಿಳಿಸಲಾಗಿದೆ. ಕೊರೊನಾದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು, ಪ್ರಭಾವ ಕಡಿಮೆ ಮಾಡಲು ಜೂನ್ 30ರ ವರೆಗೆ ಕಠಿಣ ನಿಯಮಾವಳಿ ಮುಂದುವರಿಸುವಂತೆ ಸಲಹೆ ನೀಡಲಾಗಿದೆ.
ಕೇವಲ ಹೆಸರಿಗಷ್ಟೇ ನಿಯಮಾವಳಿಗಳು ಇರುವುದಲ್ಲ. ಅದನ್ನು ಸೂಕ್ತ ರೀತಿಯಲ್ಲಿ ಜಾರಿಗೆ ತರಬೇಕು. ಅಧಿಕಾರಿಗಳು, ಜಿಲ್ಲಾ, ಸ್ಥಳೀಯ ಆಡಳಿತ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸೂಚಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನಸಾಮಾನ್ಯರು ಕೊವಿಡ್ ನಿಯಮಗಳನ್ನು ಅನುಸರಿಸುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.