ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ತಮ್ಮದೇ ಸರ್ಕಾರದ ಹಗರಣಗಳನ್ನು ಬಯಲಿಗೆಳೆದು ಬೆನ್ನು ತಟ್ಟಿಸಿಕೊಂಡಿದ್ದಾರೆ. ತಮ್ಮ ಪಕ್ಷದ ನೇತೃತ್ವದ ಸರ್ಕಾರ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಲು ವಿಫಲ ಆಗಿದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಇದೇ ವೇಳೆ ಅವರು ಕೋಮುವಾದಿ ಮನಸ್ಥಿತಿಯನ್ನು ಹೊರ ಹಾಕಿದ್ದಾರೆ. ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಮುಸ್ಲಿಮರು ಮಾತ್ರ ಭಾಗಿಯಾಗಿದ್ದಾರೆ ಎಂದು ಬಿಂಬಿಸುವ ಸಲುವಾಗಿ ಕೆಲವೊಂದು ಹೆಸರನ್ನು ಮಾತ್ರ ಓದಿ ಹೇಳಿದ್ದಾರೆ. ಆ ಮೂಲಕ ಮತ್ತೊಮ್ಮೆ ಮುಸ್ಲಿಂ ಸಮುದಾಯದ ಮೇಲೆ ಗೂಬೆ ಕೂರಿಸುವ ತಮ್ಮ ಹಳೇಯ ಚಾಳಿಯನ್ನು ಮುಂದುವರಿಸಿದ್ದಾರೆ.
ದೇಶ ಹಾಗೂ ನಮ್ಮ ರಾಜ್ಯ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿರುವ ವೇಳೆಯಲ್ಲಿ ಸಂಸದರ ಸ್ಥಾನದಲ್ಲಿ ಇರುವ ಓರ್ವ ವ್ಯಕ್ತಿ ಈ ರೀತಿ ಹೇಳಿಕೆ ನೀಡಿರುವುದು ಶೋಭೆಯಲ್ಲ. ಎಲ್ಲರೂ ಒಟ್ಟಾಗಿ ಕೊರೊನಾ ವಿರುದ್ಧ ಹೋರಾಟ ಮಾಡಬೇಕಾದ ಈ ಸಂದರ್ಭದಲ್ಲಿ ಸಂಸದರ ಈ ಹೇಳಿಕೆ ಈ ಹೋರಾಟವನ್ನು ದುರ್ಬಲಗೊಳಿಸಲಿದೆ. ಈ ನಡುವೆ ಶಾಸಕರೊಬ್ಬರು ಮದರಸ ಬಗ್ಗೆಯೂ ಅವಹೇಳನ ಆಗುವ ರೀತಿಯಲ್ಲಿ ಮಾತನಾಡಿದ್ದಾರೆ. ಇದು ಮುಸ್ಲಿಂ ಸಮಾಜವನ್ನು ಮತ್ತೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರ. ಸಮಾಜದಲ್ಲಿ ಒಡಕು ಉಂಟು ಮಾಡುವ ಷಡ್ಯಂತ್ರ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಸಮಾಜದ ನಡುವೆ ಭಿನ್ನಾಭಿಪ್ರಾಯ ಸೃಜಿಸುವ ಇಂಥವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ಆಗ್ರಹಿಸುತ್ತೇವೆ.
ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ
(ರಾಜ್ಯಾಧ್ಯಕ್ಷರು,ಎಸ್ಸೆಸ್ಸೆಫ್ ಕರ್ನಾಟಕ)