ಮಕ್ಕಾ: ಪವಿತ್ರ ರಂಜಾನ್ ತಿಂಗಳಲ್ಲಿ ಉಮ್ರಾ ನಿರ್ವಹಿಸಲು ಸೌದಿ ಅರೇಬಿಯಾದಿಂದ ಮಕ್ಕಾಗೆ ಆಗಮಿಸುವ ಯಾತ್ರಿಕರು ಕೋವಿಡ್ ಲಸಿಕೆ ಪಡೆಯುವ ಅಗತ್ಯವಿಲ್ಲ ಎಂದು ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಹೇಳಿದೆ. ಆದರೆ, ಹಜ್ ಮತ್ತು ಉಮ್ರಾ ಯಾತ್ರಾರ್ಥಿಗಳಿಗೆ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳು ರಂಜಾನ್ ಪ್ರಾರಂಭವಾಗುವ ಮೊದಲು ಲಸಿಕೆ ಹಾಕಿಸಬೇಕು. ಲಸಿಕೆ ಪಡೆಯದ ಸಿಬ್ಬಂದಿಗಳು ಪ್ರತಿ ವಾರ ಪಿಸಿಆರ್ ನಕಾರಾತ್ಮಕ ಪ್ರಮಾಣಪತ್ರವನ್ನು ಒದಗಿಸಬೇಕಾಗುತ್ತದೆ.
ಯಾತ್ರಾರ್ಥಿಗಳಿಗೆ ಲಸಿಕೆ ಕಡ್ಡಾಯವಲ್ಲದಿದ್ದರೂ, ಮುಖವಾಡ ಧರಿಸುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, ಉಮ್ರಾ ಮತ್ತು ಪ್ರಾರ್ಥನೆಗಾಗಿ ಪರವಾನಗಿ ಪಡೆಯುವುದು, ಮತ್ತು ತವಕಲ್ನಾ ಆ್ಯಪ್ ಸಕ್ರಿಯಗೊಳಿಸುವಂತಹ ಎಲ್ಲಾ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ನಿಯಮಗಳನ್ನು ಪಾಲಿಸದವರನ್ನು ಕಂಡುಹಿಡಿಯಲು ರಂಜಾನ್ ಸಮಯದಲ್ಲಿ ತಪಾಸಣೆ ತೀವ್ರಗೊಳಿಸಲಾಗುವುದು ಎಂದು ಪುರಸಭೆ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ.
ರಂಜಾನ್ ಸಮಯದಲ್ಲಿ ಮಸೀದಿ ದಟ್ಟಣೆಯಿಂದ ಕೂಡಿರುವುದರಿಂದ ಸಮಯ ನಿಷ್ಠೆಯನ್ನು ಪಾಲಿಸಬೇಕು ಎಂದು ಅಧಿಕಾರಿಗಳು ಮಕ್ಕಾಗೆ ಭೇಟಿ ನೀಡುವವರಿಗೆ ಎಚ್ಚರಿಕೆ ನೀಡಿದ್ದಾರೆ. ಪರವಾನಗಿಯಲ್ಲಿ ನೋಂದಾಯಿಸಿರುವ ಸಮಯ ಪ್ರಕಾರ ಅಲ್-ಹರಮ್ ಮಸೀದಿಗೆ ಆಗಮಿಸಿ ಇದನ್ನು ವ್ಯವಸ್ಥೆಗೊಳಿಸಬೇಕು. ಸಮಯಕ್ಕೆ ಮುಂಚಿತವಾಗಿ ಮಕ್ಕಾವನ್ನು ಪ್ರವೇಶಿಸಲು ಪ್ರಯತ್ನಿಸಿದ್ದಲ್ಲಿ ಗಡಿಯಲ್ಲಿರುವ ಚೆಕ್ ಪೋಸ್ಟ್‌ಗಳಿಂದ ಹಿಂತಿರುಗಿಸಲಾಗುವುದು. 18 ರಿಂದ 70 ವರ್ಷದೊಳಗಿನ ಜನರು ಇಅ್ ತಮರ್ನಾ ಆ್ಯಪ್ ಮೂಲಕ ಉಮ್ರಾ ನಿರ್ವಹಿಸಲು ಅನುಮತಿ ಪಡೆಯಬಹುದು.
ರಂಜಾನ್ ತಿಂಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಉಮ್ರಾ ಯಾತ್ರಿಕರು ಪವಿತ್ರ ನಗರವನ್ನು ತಲುಪುವ ನಿರೀಕ್ಷೆಯಿದೆ. ವಿದೇಶಗಳಿಂದ ಬರುವ ಯಾತ್ರಾರ್ಥಿಗಳು ಲಸಿಕೆ ಪಡೆದಿದ್ದರೂ, ಅವರು ಸೌದಿ ಅರೇಬಿಯಾಕ್ಕೆ ಬಂದ 3 ದಿನಗಳ ಸಂಪರ್ಕತಡೆಯನ್ನು ಪೂರ್ಣಗೊಳಿಸಬೇಕು. ಈ ವರ್ಷ ಸೌದಿ ಅರೇಬಿಯಾದಿಂದ ಹಜ್‌ಗೆ ಆಗಮಿಸುವ ಯಾತ್ರಿಕರು ದುಲ್ ಹಜ್‌ಗೆ ಮೊದಲು ಎರಡು ಡೋಸ್ ಲಸಿಕೆಗಳನ್ನು ಪಡೆದಿರಬೇಕು.