ಬೆಂಗಳೂರು,ಏ.02: ರಾಜ್ಯಾದ್ಯಂತ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಪರಿಗಣಿಸಿ ಪ್ರಸ್ತುತ ನಡೆಯುತ್ತಿರುವ 6-9ನೇ ತರಗತಿಗಳನ್ನು ಸ್ಥಗಿತಗೊಳಿಸಿ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ 6-9ನೇ ತರಗತಿವರೆಗೆ ತರಗತಿಗಳನ್ನು ನಿಲ್ಲಿಸಲಾಗುತ್ತದೆ. ರಾಜ್ಯದ ಅನುದಾನಿತ ಹಾಗೂ ಅನುದಾನ ರಹಿತ 6-9 ರ ತರಗತಿಗಳನ್ನು ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ. ಮುಂದಿನ ಆದೇಶದವರೆಗೆ ತರಗತಿ ನಡೆಸದಂತೆ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಮಾತನಾಡಿರುವ ಶಿಕ್ಷಣ ಸಚಿವ ಸುರೇಶ್‌ಕುಮಾರ್, ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ಈ ವಯೋಮಾನದ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 10 ನೇ ತರಗತಿಗಳು ಎಂದಿನಂತೆ ಮುಂದುವರೆಯಲಿದ್ದು, ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಲ್ಲ ಎಂದಿದ್ದಾರೆ.
ಕಡ್ಡಾಯ ಶಿಕ್ಷಣ ಕಾಯಿದೆಯ ಅವಕಾಶಗಳಡಿಯಲ್ಲಿ 6-9ನೇ ತರಗತಿಗಳಿಗೆ ಸಂಬಂಧಿಸಿದಂತೆ ಶಾಲೆಗಳು ನಡೆಸಬೇಕಾದ ಮೌಲ್ಯಾಂಕನ ಪರೀಕ್ಷೆಗಳ ಕುರಿತಂತೆ ಮುಂದಿನ ದಿನಗಳಲ್ಲಿ ಅಗತ್ಯ ನಿರ್ದೇಶನಗಳನ್ನು ನೀಡಲಾಗುವುದೆಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. 6 ರಿಂದ 9ರ ವರೆಗಿನ ಭೌತಿಕ ತರಗತಿ ಮಾತ್ರ ಸ್ಥಗಿತ ಮಾಡಲಾಗಿದೆ. ಆನ್ಲೈನ್ ಕ್ಲಾಸ್ ಎಂದಿನಂತೆ ಮುಂದುವರೆಸಬಹುದು ಎಂದು ಸರ್ಕಾರ ಆದೇಶಿಸಿದೆ.
10, 11 ಮತ್ತು 12 ನೇ ತರಗತಿಗಳು ಎಂದಿನಂತೆ ಮುಂದಿದುವರೆಯಲಿವೆ. ಮುಂದಿನ ಸೂಚನೆ ಬರುವವರೆಗೆ ಸ್ಥಗಿತಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.